ಉಡುಪಿ: ಕ್ಯಾಟರಿಂಗ್ ಕೆಲಸ ಮಾಡಿಕೊಂಡು ಸಿಎ ತೇರ್ಗಡೆಯಾದ ಹೋಟೆಲ್ ಕಾರ್ಮಿಕನ ಪುತ್ರ
ಉಡುಪಿ ಜ.11(ಉಡುಪಿ ಟೈಮ್ಸ್ ವರದಿ): ಸಾಧನೆ ಮಾಡುವ ಛಲ ಇದ್ದರೆ ಯಾವುದೇ ಸಮಸ್ಯೆಗಳು ಅಡ್ಡಿ ಇಲ್ಲ ಎಂಬುದನ್ನು ಈಗಾಗಲೆ ಉಡುಪಿ ಜಿಲ್ಲೆಯ ಹಲವಾರು ಯುವ ಪ್ರತಿಭೆಗಳು ತೋರಿಸಿಕೊಟ್ಟಿದ್ದಾರೆ. ಇದೀಗ ಇವರ ಸಾಲಿಗೆ ಮತ್ತೊಬ್ಬ ಸಾಧಕ ಸೇರಿಕೊಂಡಿದ್ದಾರೆ.
ಉಡುಪಿ ತಾಲೂಕಿನ ಹಿರಿಯಡ್ಕದ ಬೆಳ್ಳರಪಾಡಿಯ ಯುವಕ ರಘುರಾಮ ಪ್ರಭು ಬಡತನದ ನಡುವೆಯೂ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ.
ಉಡುಪಿಯ ಹೋಟೆಲ್ ವೊಂದರಲ್ಲಿ ವೈಟರ್ ಆಗಿರುವ ಬೆಳ್ಳರಪಾಡಿಯ ದೇವೇಂದ್ರ ಪ್ರಭು ಹಾಗೂ ಆನಂದಿ ಪ್ರಭು ಅವರ ಮಗನಾದ ರಘುರಾಮ ಪ್ರಭು ಅವರು 2016ರಲ್ಲಿ ಸಿಎ ಪರೀಕ್ಷೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಸಿಎ ತರಗತಿಗೆ ದಾಖಲಾತಿ ಪಡೆದುಕೊಂಡಿದ್ದರು. ಆ ಬಳಿಕ ಬಡತನದ ಕಾರಣ ತಾನೂ ಬಿಡುವಿನ ವೇಳೆಯಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡು ದುಡಿಯುವ ಜೊತೆಗೆ ಓದುವುದನ್ನೂ ಮುಂದುವರೆಸಿ ಇದೀಗ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಹೊಂಡಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ಉನ್ನತ ಉದ್ಯೋಗ ಪಡೆಯುವ ಹಂಬಲದಲ್ಲಿದ್ದಾರೆ.
ಈ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಅವರು, ಕಾರ್ಕಳದ ಜ್ಞಾನ ಸುಧಾ ಕಾಲೇಜಿನಲ್ಲಿ ಪಿಯುಸಿ ಮಾಡಿದ್ದೆ, ವೈದ್ಯನಾಗಬೇಕು ಎಂದುಕೊಂಡಿದ್ದೆ. ಆದರೆ ಬಡತನದ ಕಾರಣ ಅದು ಸಾಧ್ಯವಾಗುವುದು ಕಷ್ಟವಾಗಿತ್ತು. ಇದರ ಜೊತೆಗೆ ಸಿಎ ಮಾಡುಬೇಕು ಎನ್ನುವ ಆಸೆಯೂ ಇತ್ತು. ಹಾಗಾಗಿ ಸಿಎ ಮಾಡಿದೆ. ಇದೀಗ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ಖುಷಿ ತಂದಿದೆ. ಮನೆಯಲ್ಲಿಯೂ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಈಗ ಅವರಿಗೂ ಖುಷಿಯಾಗಿದೆ. ಎಲ್ಲರೂ ಶುಭ ಹಾರೈಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.