ಎಲ್ಲಾ ಕಾರ್ಮಿಕರು ಇ-ಶ್ರಮ್ ನಲ್ಲಿ ನೊಂದಾಯಿಸಿ- ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಜ.11: ಅಸಂಘಟಿತ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸಲು, ಕಾರ್ಮಿಕರ ದತ್ತಾಂಶವನ್ನು ಇ-ಶ್ರಮ್ ನಲ್ಲಿ 379 ವಿವಿಧ ವರ್ಗಗಳ ಕಾರ್ಮಿಕರ ನೊಂದಣಿ
ನಡೆಯುತ್ತಿದ್ದು, ಇದರಲ್ಲಿ ಪ್ರತಿಯೊಬ್ಬರೂ ನೊಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಮಿಕ ಇಲಾಖೆಯ ವಿವಿದ ಸಮಿತಿಗಳ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡಿದರು. ದೇಶದಾದ್ಯಂತ 38 ಕೋಟಿಗೂ ಅಧಿಕ ಕಾರ್ಮಿಕರು ಅಸಂಘಟಿತ ವರ್ಗಗಳಲ್ಲಿ ತೊಡಗಿ ಕೊಂಡಿದ್ದಾರೆ, ಜಿಲ್ಲೆಯಲ್ಲಿ ಇವರ ಸಂಖ್ಯೆ 3 ಲಕ್ಷಕ್ಕೂ ಅಧಿಕವಾಗಿದೆ. ಇ ಶ್ರಮ್ ನಲ್ಲಿ ಪ್ರತಿಯೊಬ್ಬರೂ ಹೆಸರು, ವೃತ್ತಿ, ವಿಳಾಸ, ವಿದ್ಯಾರ್ಹತೆ, ಕೌಶಲ್ಯತೆಯ ವಿಧü, ಕುಟುಂಬದ ವಿವರ, ಬ್ಯಾಂಕ್ ಖಾತೆಯ ವಿವರ ಇತ್ಯಾದಿಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು ಎಂದರು.

ಇ-ಶ್ರಮ್ ನಲ್ಲಿ ನೊಂದಾಯಿಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ಜಾರಿಗೆ ತರಲಿರುವ ಸಾಮಾಜಿಕ
ಭದ್ರತಾ ಯೋಜನೆಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದ ಅವರು , ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆ ಕೆಲಸದವರು, ಚಾಲಕರು, ಟೈಲರ್ ಗಳು, ಬೀದಿ ಬದಿ ವ್ಯಾಪಾರಿಗಳು ನೊಂದಾಯಿಸಿಕೊಳ್ಳಬೇಕು ಎಂದರು. ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, 18-40 ವರ್ಷದೊಳಗಿನ ಅಂಗಡಿ ಮಾಲಿಕರು, ಚಿಲ್ಲರೆ ವ್ಯಾಪಾರಿಗಳು,
ಅಕ್ಕಿ ಎಣ್ಣೆ ಗಿರಣಿ ಮಾಲೀಕರು, ವರ್ಕ್ ಶಾಪ್ ಮಾಲೀಕರು, ಕಮಿಷನ್ ಎಜೆಂಟ್ ಗಳು, ರಿಯಲ್ ಎಸ್ಟೇಟ್ ಬ್ರೋಕರ್‍ಗಳು, ಸಣ್ಣ ಹೋಟೆಲ್ ರೆಸ್ಟೋರೆಂಟ್‍ಗಳ ಮಾಲೀಕರು ಸೇರಿದಂತೆ ಇತರೆ ಸಣ್ಣ ವ್ಯಾಪಾರಗಳಲ್ಲಿ ತೊಡಗಿಕೊಂಡ ಸ್ವಯಂ ಉದ್ಯೋಗಿಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.

ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು,
ಯಾರೋಬ್ಬರೂ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದು ಕಂಡು ಬಂದಲ್ಲಿ ಅವರುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವುದರ ಜೊತೆಗೆ ಬಾಲ ಕಾರ್ಮಿಕರಿಗೆ ಪುರ್ನ ವಸತಿ ಒದಗಿಸಲು ಸಹ ಮುಂದಾಗಬೇಕು ಎಂದರು. ಜಾತ್ರೆ, ಉತ್ಸವ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಮಕ್ಕಳು ವಿವಿಧ ಆಟಿಕೆಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ಎಚ್ಚರವಹಿಸಬೇಕು ಎಂದ ಅವರು, ಯಾವುದೇ ಸರ್ಕಾರಿ ಸಂಸ್ಥೆಗಳು ಅಥವಾ ಖಾಸಗಿ ಸಂಸ್ಥೆಗಳ ದೊಡ್ಡ ಪ್ರಮಾಣದ ಕಟ್ಟಡ ನಿರ್ಮಾಣಕ್ಕೆ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಕಾರ್ಮಿಕರುಗಳು ಆಗಮಿಸುತ್ತಿದ್ದು ಆಂತಹವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ, ಆವರ ಶಿಕ್ಷಣದ ಬಗ್ಗೆ ಕ್ರಮ ವಹಿಸಬೇಕು ಎಂದರು.

ತಾಲ್ಲೂಕು ಮಟ್ಟದಲ್ಲಿಯೂ ಬಾಲ ಕಾರ್ಮಿಕರ ರಕ್ಷಣೆಯ ಟಾಸ್ಕ್ ಪೋರ್ಸ್ ಸಮಿತಿಗಳನ್ನು ತಹಸೀಲ್ದಾರ್ ಅವರ
ಆಧ್ಯಕ್ಷತೆಯಲ್ಲಿ ರಚಿಸಿ, ಆಗಿಂದಾಗ್ಗೆ ಸಭೆ ನಡೆಸುವುದರ ಜೊತೆಗೆ ಸಂಶಯಾಸ್ಪದ ಸ್ಥಳಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದರು. ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಯತೀಶ್, ಎ.ಎಸ್ಪಿ.ಸಿದ್ದಲಿಂಗಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ವರ್ಗದ ಕಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!