ಸೆ.10 ಮತ್ತು 11ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ: ಭಕ್ತರಿಗಿಲ್ಲ ರಥಬೀದಿ ಪ್ರವೇಶ

ಉಡುಪಿ: (ಉಡುಪಿ ಟೈಮ್ಸ್ ವರದಿ) ಶ್ರೀಕೃಷ್ಣ ಮಠದಲ್ಲಿ ಸೆ.10 ಮತ್ತು 11ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ (ಮೊಸರು ಕುಡಿಕೆ) ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರಕಾರದ ಹೊಸ ಕೋವಿಡ್-19 ಮಾರ್ಗಸೂಚಿಗಳು ಸೆ.21ರಿಂದ ಜಾರಿಗೊಳ್ಳುವ ಕಾರಣ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 100 ಮಂದಿಗೆ ಅವಕಾಶವಿದೆ. ಆದರೆ ಸದ್ಯ ಇರುವ ಮಾರ್ಗಸೂಚಿಯಂತೆ ಗರಿಷ್ಠ 50 ಮಂದಿ ಮಾತ್ರ ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು. ಆದುದರಿಂದ ಈ ಬಾರಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಕಾರ್ಯಕ್ರಮಗಳನ್ನು ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಸುವಂತೆ ಪರ್ಯಾಯ ಅದಮಾರು ಮಠದ ಸ್ವಾಮೀಜಿ ಅವರಿಗೆ ತಿಳಿಸಲಾಗಿದೆ. ಅವರೂ ಇದಕ್ಕೆ ಸಮ್ಮತಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆಯ ಸಾಂಪ್ರದಾಯಿಕ ಆಚರಣೆಯಷ್ಟೆ ಇರುತ್ತದೆ. ಈ ವೇಳೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಸಂಪ್ರದಾಯದಂತೆ ಮಠಕ್ಕೆ ಸಂಬಂಧಿಸಿದ ಸೀಮಿತ ಸಂಖ್ಯೆಯ ಜನರು ಇವುಗಳನ್ನು ನಡೆಸುತ್ತಾರೆ ಎಂದರು. ಮೊಸರು ಕುಡಿಕೆಯ ಸಂದರ್ಭದಲ್ಲಿ ರಥಬೀದಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಈ ಸಂದರ್ಭದಲ್ಲಿ ಮಠ ಮತ್ತು ರಥಬೀದಿ ಸಂಪರ್ಕದ ಎಲ್ಲಾ ರಸ್ತೆಗಳನ್ನು ಮುಚ್ಚಲಾಗುತ್ತದೆ. ಪೊಲೀಸರು ಈ ವೇಳೆ ಬಂದೋಬಸ್ತ್ ನೋಡಿಕೊಳ್ಳಲಿದ್ದಾರೆ ಎಂದರು.

ಈ ಬಾರಿ ಅಷ್ಟಮಿಯ ಯಾವುದೇ ಸ್ಪರ್ಧೆಗಳಿಗೂ ಅವಕಾಶವಿಲ್ಲ. ಹೀಗಾಗಿ ಈ ಬಾರಿ ವೇಷಗಳೂ ಇರುವುದಿಲ್ಲ. ಮಠದ ವತಿ ಯಿಂದ ಕೇವಲ ಸಾಂಪ್ರದಾಯಿಕ ಆಚರಣೆಯಷ್ಟೇ ನಡೆಯುತ್ತದೆ ಎಂದವರು ಸ್ಪಷ್ಟಪಡಿಸಿದರು.

ಹೆಚ್ಚುವರಿ 22 ಮೊಬೈಲ್ ಟೀಮ್: ಕೋವಿಡ್-19ರ ಗುಣಲಕ್ಷಣವಾದ ಶೀತ, ಜ್ವರ, ಕೆಮ್ಮು ಇತ್ಯಾದಿ ಇರುವವರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಮುಂದೆ ಬರುವಂತೆ ಜಿಲ್ಲಾಧಿಕಾರಿ ಜಿಲ್ಲೆಯ ಜನತೆಗೆ ಮನವಿ ಮಾಡಿದರು.
ಜಿಲ್ಲೆಯ ಜನರು ಈಗಾಗಲೇ ಇರುವ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೊಂದಿಗೆ ಪ್ರಾರಂಭಿಸಿರುವ 10 ಫೀವರ್ ಕ್ಲಿನಿಕ್ ಹಾಗೂ 20 ಮೊಬೈಲ್ ಟೀಮ್‌ಗಳಲ್ಲಿ ತಮ್ಮ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿ ಕೊಳ್ಳಬಹುದು. ಅಲ್ಲದೇ ಇನ್ನೂ 22 ಹೆಚ್ಚುವರಿ ಮೊಬೈಲ್ ಟೀಮ್ ರಚನೆಗೆ ಸರಕಾರ ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೊರೋನ ಗುಣಲಕ್ಷಣದವರು ಪರೀಕ್ಷೆಗೆ ಬಾರದೇ ಮನೆಯಲ್ಲಿದ್ದರೆ, ಮನೆಯ ಉಳಿದ ಸದಸ್ಯರಿಗೂ ರೋಗದ ಸೋಂಕು ತಗಲಲು ಕಾರಣರಾಗುತ್ತಾರೆ. ಇದರಿಂದ ಮನೆಯಲ್ಲಿರುವ 50 ವರ್ಷ ಮೇಲ್ಪಟ್ಟವರು ಹಾಗೂ ಹಿರಿಯರಿಗೆ ಸೋಂಕು ತಗಲಿದರೆ, ಅವರನ್ನು ಬದುಕಿಸಲು ಕಷ್ಟ ಪಡಬೇಕಾ ಗುತ್ತದೆ ಎಂದು ಅವರು ಎಚ್ಚರಿಸಿದರು.

ನೀವು ಬೇಗನೆ ಪರೀಕ್ಷೆಗೆ ಬಂದು ಪಾಸಿಟಿವ್ ಕಾಣಿಸಿಕೊಂಡರೂ, ಸರಕಾರಿ ವ್ಯವಸ್ಥೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಅಥವಾ ಮನೆಯಲ್ಲೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಉಳಿದುಕೊಂಡು ಚಿಕಿತ್ಸೆ ಪಡೆಯ ಬಹುದು. ದಯವಿಟ್ಟು ಲಕ್ಷಣವಿದ್ದು ಮಾತ್ರೆ, ಕಷಾಯ ಕುಡಿದು ಸೋಂಕನ್ನು ನಿರ್ಲಕ್ಷಿಸಬೇಡಿ ಎಂದವರು ಹೇಳಿದರು.

ಈಗಾಗಲೇ ತೆರೆದಿರುವ ಅಂಗಡಿ, ಹೊಟೇಲ್, ಮಾಲ್‌ಗಳ ನೌಕರರು ಆಗಾಗ ಚೆಕ್‌ಅಪ್ ಮಾಡಿಸಿಕೊಳ್ಳಬೇಕು. ಇಲ್ಲದೇ ಇದ್ದರೆ ರೋಗದ ಗುಣಲಕ್ಷಣವಿಲ್ಲದೇ ಸೋಂಕು ಇದ್ದರೆ, ಇದರಿಂದ ಅಲ್ಲಿಗೆ ಪ್ರತಿದಿನ ಬರುವ ನೂರಾರು ಮಂದಿಗೆ ಸೋಂಕು ಹರಡಲು ಇವರು ಕಾರಣರಾಗುತ್ತಾರೆ. ಆದುದರಿಂದ ಇಂಥ ಕಡೆ ಕೆಲಸ ಮಾಡುವವರು ಸ್ವಯಂಪ್ರೇರಿತರಾಗಿ ಪರೀಕ್ಷೆಗೊಳಗಾಗುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!