ಕೊರೋನಾ ಸೋಂಕಿತ 52 ಮೃತ ದೇಹದ ಅಂತ್ಯಕ್ರಿಯೆ ನಡೆಸಿದ ಮೊಗವೀರ ಯುವ ಸಂಘಟನೆ
ಉಡುಪಿ: (ಉಡುಪಿ ಟೈಮ್ಸ್ ವರದಿ) ನಾಡೋಜ ಡಾ. ಜಿ. ಶಂಕರ್ ನೇತೃತ್ವದ ಮೊಗವೀರ ಯುವ ಸಂಘಟನೆಯ ಕೊರೊನ ಫ್ರಾಂಟ್ಲೈನ್ ವಾರಿಯರ್ಸ್‌ನಿಂದ ಜಿಲ್ಲೆಯಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ಐವತ್ತಕ್ಕೂ ಹೆಚ್ಚೂ ಕೊರೋನಾ ಸೋಂಕಿನಿಂದ ಮೃತರಾದವರ ಅಂತ್ಯಸಂಸ್ಕಾರ ನಡೆಸುವ ಮೂಲಕ ಮಾದರಿ ಸಂಘಟನೆ ಎಂಬ ಶ್ಲಾಘನೆಗೆ ಒಳಗಾಗಿದೆ.
ರವಿವಾರ ಉದ್ಯಾವರದ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡರು ವಿನಯ ರಾಜು (66 ವರ್ಷ) ಇವರ ಅಂತ್ಯಕ್ರಿಯೆ ನಡೆಸುವ ಮೂಲಕ ಜಿಲ್ಲೆಯಲ್ಲಿ ಇವರೆಗೆ 52 ಕೊರೋನಾ ಸೋಂಕಿತರ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಮೊಗವೀರ ಯುವಸಂಘಟನೆ ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ಆರೋಗ್ಯ ಕಾರ್ಡ್ ವಿತರಣೆ ಸಹಿತ ಹಲವಾರು ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಂಡ ಸಂಘಟನೆ ಕೊರೋನಾ ಫ್ರಾಂಟ್ಲೈನ್ ವಾರಿಯರ್ಸ್ ಆಗಿ ಜಿಲ್ಲಾಡಳಿತದ ಜೊತೆ ಕೈಜೋಡಿಸಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ನಾಡೋಜ ಡಾ ಜಿ ಶಂಕರ್ರವರ ಮಾರ್ಗದರ್ಶನದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ ಎಮ್ ಮತ್ತು ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ ಇವರ ನೇತೃತ್ವದಲ್ಲಿ ಇವರೆಗೆ 52 ಕೊರೊನ ಸೋಂಕಿತ ಶವಗಳ ಅಂತ್ಯ ಸಂಸ್ಕಾರ ನೆರವೆರಿಸಿದ್ದಾರೆ.
ಉಡುಪಿ ಜಿಲ್ಲಾ ಮೊಗವೀರ ಯುವಸಂಘಟನೆ ಯಾವುದೇ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಅವರವರ ಧರ್ಮದ ಸಂಪ್ರದಾಯದಂತೆ ನಡೆಸಿದ ವಾರಿಯರ್ಸ್ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಉದ್ಯಾವರದ ಶವ ಸಂಸ್ಕಾರದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ, ಉಪಾಧ್ಯಕ್ಷರಾದ ರವೀಂದ್ರ ಶ್ರೀಯಾನ್, ಚಂದ್ರೇಶ್ ಪಿತ್ರೋಡಿ ಸಹಕರಿಸಿದರು. ಮೊಗವೀರ ಯುವ ಸಂಘಟನೆಯ ಬೆಳ್ಳಂಪಳ್ಳಿ ಘಟಕದ ಅಧ್ಯಕ್ಷರಾದ ನವೀನ್ ತಿಂಗಳಾಯ, ಕಾರ್ಯದರ್ಶಿ ದೇವರಾಜ್, ಪ್ರಸಾದ್, ರಾಕೇಶ್ ಸಹಕರಿಸಿದರು.