ಉದ್ಯಾವರ – ಕಡೆಕಾರ್: ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಅಭಿಯಾನ
ಉಡುಪಿ (ಉಡುಪಿ ಟೈಮ್ಸ್ ವರದಿ) : ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಮತ್ತು ಜೇಸಿಐ ಉದ್ಯಾವರ – ಕುತ್ಪಾಡಿ ಸಹಭಾಗಿತ್ವದಲ್ಲಿ, ಉದ್ಯಾವರ, ಕುತ್ಪಾಡಿ, ಕಡೆಕಾರ್ ಗ್ರಾಮದ ಪ್ರಮುಖ ರಸ್ತೆಗಳ ಎರಡು ಇಕ್ಕೆಲಗಳಲ್ಲಿ ಬೆಳೆದ ಹುಲ್ಲು ಕಸಕಡ್ಡಿಗಳನ್ನು ತೆಗೆದು ಸ್ವಚ್ಛತೆ ಮಾಡಲಾಯಿತು.
ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ 20ನೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಹಾಯಕ ಧರ್ಮಗುರು ವಂ. ಫಾ. ರೊಲ್ವಿನ್ ಅರಾನ್ನ, ನಮ್ಮ ಪರಿಸರದ ಸುತ್ತಮುತ್ತ ಸ್ವಚ್ಛವಾಗಿದ್ದರೆ ಮಾತ್ರ ನಾವು ಆರೋಗ್ಯವಾಗಿರಬಹುದು. ಅಂತಹ ಒಂದು ಕಾರ್ಯಕ್ರಮಕ್ಕೆ ಸಮಾನ ಮನಸ್ಕ ಸಂಘಟನೆಗಳು ಇಂದು ಚಾಲನೆ ನೀಡಿವೆ.
ಇದು ದಿಕ್ಸೂಚಿ ಮಾತ್ರ. ಪ್ರತಿ ವಾರ ನಮ್ಮ ನೆರೆಕರೆಯವರೊಂದಿಗೆ ನಮ್ಮ ಪರಿಸರದ ವಠಾರವನ್ನು ಸ್ವಚ್ಛ ಮಾಡಿದರೆ, ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯ ಮತ್ತು ಎಲ್ಲ ರೀತಿಯ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಾಮನ ಬಂಗೇರ ಮಾತನಾಡಿ, ಇಂತಹ ಯುವ ಸಂಘಟನೆಗಳು ಪರಿಸರದಲ್ಲಿ ಜೀವಾಳವಾಗಿದ್ದರೆ, ಪರಿಸರ ಸ್ವಚ್ಛತೆ ಮತ್ತು ಗ್ರಾಮದ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಿರೀಶ್ ಕುಮಾರ್ ಉದ್ಯಾವರ, ಕುತ್ಪಾಡಿ ರಾಮ್ ದೂತ್ ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಸನ್ನ ಡಿ. ಅಮಿನ್, ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಅಧ್ಯಕ್ಷ ಲ. ಜೋನ್ ಫೆರ್ನಾಂಡಿಸ್, ಕಾರ್ಯದರ್ಶಿ ಲ. ಜೆರಾಲ್ಡ್ ಪಿರೇರ, ಕೋಶಾಧಿಕಾರಿ ಲ. ಗಾಡ್ಫ್ರೀ ಡಿಸೋಜಾ, ನಿಕಟ ಪೂರ್ವ ಅಧ್ಯಕ್ಷ ಲ. ಹೆನ್ರಿ ಡಿಸೋಜಾ, ಜೇಸಿಐ ಉದ್ಯಾವರ ಕುತ್ಪಾಡಿ ಅಧ್ಯಕ್ಷ ಜೆಸಿ ದಯಾನಂದ ಶೆಟ್ಟಿ, ಐಸಿವೈಎಂ ಉದ್ಯಾವರ ಘಟಕದ ಅಧ್ಯಕ್ಷ ರೋಯಲ್ ಕಸ್ತಲಿನೊ, ಸಲಹೆಗಾರರಾದ ರೋಯ್ಸ್ ಫೆರ್ನಾಂಡಿಸ್, ಜೂಲಿಯಾ ಡಿಸೋಜಾ, ಸುವರ್ಣ ಮಹೋತ್ಸವ ಸಮಿತಿಯ ಪ್ರಮುಖರಾದ ರೊನಾಲ್ಡ್ ಡಿಸೋಜ, ವಿಲ್ಫ್ರೆಡ್ ಡಿಸೋಜ, ಜೋನ್ ಗೋಮ್ಸ್, ಪ್ರಿಯಾಂಕಾ ಡಿಸೋಜಾ, ಹರಿ ಪಿತ್ರೋಡಿ, ಎಡ್ವಿನ್ ಮತಾಯಸ್ ಮತ್ತಿತರರು ಉಪಸ್ಥಿತರಿದ್ದರು.
‘ಸ್ವಚ್ಛತಾ ಅಭಿಯಾನ’ದ ಸಂಚಾಲಕ ಹಿರಿಯ ಕೃಷಿಕ ಜೂಲಿಯನ್ ದಾಂತಿ ಸ್ವಾಗತಿಸಿದರೆ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
ಉದ್ಯಾವರ, ಕುತ್ಪಾಡಿ, ಕಡೆಕಾರ್ ಗ್ರಾಮ ವ್ಯಾಪ್ತಿಯ ಪ್ರಮುಖ ರಸ್ತೆಗಳ ಎರಡು ಇಕ್ಕೆಲಗಳಲ್ಲಿ ದೊಡ್ಡದಾಗಿ ಬೆಳೆದ ಹುಲ್ಲುಗಳಿಂದ ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಕಷ್ಟವಾಗುತ್ತಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯತ್ಗಳು ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸುವಲ್ಲಿ ಕಾರ್ಯೋನ್ಮುಖರಾಗಿದ್ದು, ಇಂದು ಸ್ವಚ್ಛತಾ ಅಭಿಯಾನದಲ್ಲಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ, ಜೇಸಿಐ ಉದ್ಯಾವರ ಕುತ್ಪಾಡಿ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಉತ್ಸಾಹದಿಂದ ಭಾಗಿಯಾದರು.
ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್ ಸಂಪಿಗೆ ನಗರ ನೇತೃತ್ವದ ಸಂಗಮ ಸಾಂಸ್ಕೃತಿಕ ವೇದಿಕೆಯ ಸದಸ್ಯರು ಸಂಜಯನಗರ ಕುತ್ಪಾಡಿ ಪರಿಸರದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು.