ಸಚಿವ ಕೋಟ ದಲಿತರಿಗೆ ನ್ಯಾಯ ಒದಗಿಸಿದ್ದಾರೆ- ದಿನಕರ ಬಾಬು ಸಮರ್ಥನೆ
ಉಡುಪಿ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಸುಂದರ ಮಾಸ್ಟರ್ ಹೆಸರಿನಲ್ಲಿ ಸತ್ಯಕ್ಕೆ ದೂರವಾದ ಆಪಾದನೆಗಳು ಪ್ರಕಟವಾಗುತ್ತಿದ್ದು ಸಚಿವ ಕೋಟ ಸಮಾಜ ಕಲ್ಯಾಣ ಸಚಿವರಾದ ನಂತರ ಇಲಾಖೆಯಲ್ಲಿ ಒಂದೊಂದು ರೂಪಾಯಿಯೂ ದಲಿತರ ಪರವಾಗಿ ಸದ್ವಿನಿಯೋಗವಾಗುತ್ತಿದೆ.
ಬಡವರ ಮಕ್ಕಳು ಕಲಿಯುವ ಹಾಸ್ಟೆಲ್ ಗಳಲ್ಲಿ ಪಾರದರ್ಶಕ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ರಸ್ತೆ, ಚರಂಡಿಗೆ ವಿನಿಯೋಗವಾಗುತ್ತಿದ್ದ ಅನುದಾನಗಳು ದಲಿತರ ಮಕ್ಕಳು ಕಲಿಯುವ ಅಂಬೇಡ್ಕರ್ ವಸತಿ ನಿಲಯ ಮತ್ತು ಕ್ರೈಸ್ ಶಾಲೆಗೆ ಮಂಜೂರು ಮಾಡಲಾಗಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದೆಲ್ಲೆಡೆ ಅಂಬೇಡ್ಕರ್ ಭವನಗಳು ಸುಸಜ್ಜಿತಗೊಳ್ಳುತ್ತಿದ್ದು ಪ್ರಥಮ ಬಾರಿಗೆ ಬಡ ದಲಿತ ಕುಟುಂಬಗಳಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಜಾರಿಯಾಗಿದೆ. ಇದರಿಂದ ವಾರ್ಷಿಕ ಸುಮಾರು 800 ಕೋಟಿ ರೂ. ಸಮಾಜ ಕಲ್ಯಾಣ ಇಲಾಖೆಯಿಂದ ಖರ್ಚಾಗುತ್ತಿದೆ.
ಸ್ವಾತಂತ್ಯದಿಂದ ಇಂದಿನವರೆಗೂ ದಲಿತೋದ್ದಾರದ ಮಾತುಗಳು ಕೇಳಿಬರುತ್ತಿವೆ ಹೊರತು ದಲಿತರಿಗೆ ಉದ್ಯೋಗವೂ ಸೇರಿದಂತೆ ಒಟ್ಟಾರೆ ಮೀಸಲಾತಿಯ ಹೆಚ್ಚಳ ಮಾಡಿದ್ದು ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜ ಕಲ್ಯಾಣ ಸಚಿವರಾದ ಮೇಲೆ ಎನ್ನುವುದು ಮರೆಯಲಾಗದು.
ಖಾಸಗಿ ದೇವಸ್ಥಾನಗಳಿಗೆ ಹಣ ಕೊಟ್ಟಿದ್ದಾರೆ ಎಂದು ಆರೋಪಿಸುವವರು ಅದನ್ನು ಪರಿಶಿಷ್ಟ ಜಾತಿಗೆ ಖರ್ಚು ಮಾಡಿದ್ದಾರೆ ಎನ್ನುವುದು ಮರೆಯಬಾರದು. ಪರಿಶಿಷ್ಟ ಜಾತಿಯ ರಸ್ತೆಗಳೂ ಸೇರಿದಂತೆ ಇಲಾಖಾ ವಿಷಯದಲ್ಲಿ ಏನೇ ತಪ್ಪು ನಡೆದರೂ ಸಚಿವರೇ ನಿಂತು ದಲಿತರಿಗೆ ನ್ಯಾಯ ಒದಗಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಇಂದು ಭ್ರಷ್ಟಾಚಾರ ರಹಿತ ಇಲಾಖೆಯೆಂದು ಗೌರವಕ್ಕೆ ಪಾತ್ರವಾಗಿದೆ. ಯಾವುದೇ ಸರ್ಕಾರ ಅಥವಾ ಮಂತ್ರಿಗಳು ಬಡವರ ಪರವಾಗಿ ಯಾವುದೇ ಘೋಷಣೆ ಮಾಡಿದರೂ ಸ್ವಲ್ಪ ವಿಳಂಬವಾದರೂ ಅನುಷ್ಠಾನವಾಗುವುದರಲ್ಲಿ ಎರಡು ಮಾತಿಲ್ಲ. ಅದನ್ನೆಲ್ಲ ಒಟ್ಟು ಸುಂದರ ಮಾಸ್ಟರ್ ರಂತಹ ಮುಖಂಡರು ಸಚಿವರ ಬಗ್ಗೆ ವ್ಯಕ್ತಿಗತವಾಗಿ ಟೀಕಿಸಿದ್ದು, ಟೀಕಿಸುವವರ ಗೌರವ ಹೆಚ್ಚುವುದಿಲ್ಲ.
ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು,ಉಚಿತ ವಿದ್ಯುತ್ ನೀಡಿದ್ದು, ಬ್ಯಾಕ್ ಲಾಗ್ ಹುದ್ದೆಯನ್ನು ಭರ್ತಿಮಾಡಿದ್ದು ಸೇರಿದಂತೆ ಅನೇಕ ದಲಿತಪರ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗ ಮೆಚ್ಚುವಂತಹದ್ದು. ಈ ಹಿನ್ನಲೆಯಲ್ಲಿ ವಿನಃಕಾರಣ ಸಚಿವರನ್ನು ಟೀಕಿಸುವುದು ಸರಿಯಲ್ಲ ಇಲಾಖೆಯ ಕಾರ್ಯಕ್ರಮಗಳನ್ನು ಅತ್ಯಂತ ಅಭಿಮಾನದಿಂದ ಸಮರ್ತನೆ ಮಾಡಬೇಕಾದ ಅವಶ್ಯಕತೆ ಇದೆಯೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜ್ಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಲಿತ ಮುಖಂಡ ದಿನಕರ ಬಾಬು ತಿಳಿಸಿದ್ದಾರೆ.