ಕ್ರೀಡೋತ್ಸವ ಮೂಲಕ ಕ್ರೀಡಾ ಕ್ರಾಂತಿಗೆ ಮುನ್ನುಡಿ ಹಾಕಬೇಕು- ಅನುರಾಗ್‌ ಸಿಂಗ್‌

ಉಡುಪಿ: ದೇಶದಲ್ಲಿ ಎಲ್ಲಾ ಎಲ್ಲಾ ಜನಪ್ರತಿನಿಧಿಗಳು ಕ್ರೀಡೋತ್ಸವ ಆಯೋಜಿಸುವ ಮೂಲಕ ಕ್ರೀಡಾ ಕ್ರಾಂತಿ ನಡೆಸಬೇಕು ಎಂದು ಕೇಂದ್ರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಕರೆ ನೀಡಿದರು.

ಶನಿವಾರ ಉಡುಪಿ ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಹಮ್ಮಿಕೊಂಡ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಅಂಗವಾಗಿ “ಅಟಲ್‌ ಉತ್ಸವ’’ದ ಪ್ರಯುಕ್ತ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಮುಕ್ತ ಪ್ರೊ ಕಬಡ್ಡಿ ಪಂದ್ಯಾಟದಲ್ಲಿ ಭಾಗಿಯಾಗಿ ಮಾತನಾಡಿ, ನಾನು ಇಂತಹ ಕ್ರೀಡೆಯನ್ನು ಉತ್ತೇಜಿಸುವ ಕಾರ್ಯಕ್ರಮಕ್ಕೆ ಕರೆದರೆ ಒಂದು ಬಾರಿಯಲ್ಲ ಹತ್ತು ಬಾರಿಯಾದರೂ ಬರುತ್ತೇನೆ ಎಂದರು.

545 ಲೋಕಸಭಾ ಸಂಸದರು 245 ರಾಜ್ಯಸಭಾ ಸಂಸದರು 4000 ಮಂದಿ ಶಾಸಕರು ಇಂತಹ ಟ್ರೋಫಿಗಳನ್ನು ಆಯೋಜಿಸಿದರೆ ದೇಶದಲ್ಲಿ ಕ್ರೀಡಾ ಕ್ರಾಂತಿ ನಡೆಸಬಹುದು. ಎಲ್ಲಾ ಕಡೆ ಇಂತಹ ಕ್ರೀಡೋತ್ಸವ ಆಯೋಜಿಸುವ ರಘುಪತಿ ಭಟ್ ಅವರಂತಹ ಮೂಂಚೂಣಿ ನಾಯಕರು ಬೇಕಾಗಿದೆ ಎಂದರು.

ಅಟಲ್ ಜಿ ಅವರು ಅಂದು ವಿಶ್ವಸಂಸ್ಥೆಯಲ್ಲಿ ಹಿಂದಿ ಯಲ್ಲಿ ಮಾತನಾಡಿದರು ಭಾರತದ ಶಕ್ತಿಯನ್ನು ಪೊಖ್ರಾನ್ ಅಣು ಸ್ಪೋಟದ ಮೂಲಕ ಜಗತ್ತಿಗೆ ತೋರಿದರು. ಭಾರತದ 50 ನೇ ಸ್ವಾತಂತ್ರ್ಯದ ವೇಳೆ ನಾನು ವ್ಯಾಪಾರ ಮೇಳಕ್ಕೆ ಅಮೆರಿಕಕ್ಕೆ ಹೋಗಿದ್ದೆ.ಆಗ ಹಾವು ಮೋಡಿ ಮಾಡುವವರು ಮತ್ತು ಭಿಕ್ಷುಕರು ಎಂದು ಅಲ್ಲಿನ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಆದರೆ ಪೊಖ್ರಾನ್ ಅಣು ಸ್ಪೋಟದ ಬಳಿಕ ಭಾರತ ಹೊರ ಹೊಮ್ಮುತ್ತಿರುವ ದೊಡ್ಡ ಶಕ್ತಿ ಎಂದು ಅಟಲ್ ವಿಶ್ವಕ್ಕೆ ತೋರಿಸಿಕೊಟ್ಟರು ಎಂದರು.

ಆರ್ ಎಸ್ ಎಸ್ ಶಾಖೆಯಲ್ಲಿ ಅಟಲ್ ಜಿ ಅವರು ಕಬಡ್ಡಿ ಆಡಲು ಶುರು ಮಾಡಿದರು. ಅವರು ತನ್ನ ಉತ್ತರದಲ್ಲೇ ಎಲ್ಲರ ಪ್ರಶಂಸೆ ಪಡೆಯುತ್ತಿದ್ದರು. ಅವರು ಕ್ರಿಕೆಟ್ ಅನ್ನು ಕೂಡ ಮೆಚ್ಚುತ್ತಿದ್ದರು ಎಂದರು.

ಜಗತ್ತಿನ ಅತೀದೊಡ್ಡ ಜಿಡಿಪಿ ಬೆಳವಣಿಗೆ ದರ 7.2 ಭಾರತದ್ದಾಗಿದೆ. ದೊಡ್ಡ ದೊಡ್ಡ ದೇಶಗಳನ್ನು ಹಿಂದಿಕ್ಕಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಾಧ್ಯವಾಗಿದೆ ಎಂದರು. ಕೋವಿಡ್ ವ್ಯಾಕ್ಸಿನ್ 200 ಕೋಟಿ ಎರಡು ಡೋಸ್ ಕೊಡುವ ಕೆಲಸ ನಮ್ಮ ಸರಕಾರ ಮಾಡಿದೆ ಎಂದರು.

ಬಿಎಫ್ 7 ಬಂದಿದೆ. ಚೀನದಲ್ಲಿ ಸಾವಿರರು ಜನರು ಬಲಿಯಾಗಿದ್ದಾರೆ. ನೀವು ಕೋವಿಡ್ ಪ್ರೋಟೋಕಾಲ್ ಗಳನ್ನು ಅನುಸರಿಸಿ ಎಂದು ಕರೆ ನೀಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿದರು. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ದೆಹಲಿ, ಹರ್ಯಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳ ಒಟ್ಟು 12 ತಂಡಗಳು ಭಾಗವಹಿಸಿವೆ. ಅನುಕ್ರಮವಾಗಿ 1 ಲ.ರೂ., 75,000 ರೂ., 50,000 ರೂ., 25,000 ರೂ. ಬಹುಮಾನಗಳನ್ನು ಪ್ರಶಸ್ತಿ ಫ‌ಲಕಗಳೊಂದಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಸ್ಥಾನಗಳ ವಿಜೇತರಿಗೆ ನೀಡಲಾಗುತ್ತಿದೆ.

ಜೀವನದ ಉದ್ದಕ್ಕೂ ನೆನಪಿಸುವಂತೆ ಸುಮಾರು 5 ಅಡಿ ಎತ್ತರದ ಆಕರ್ಷಕ ಟ್ರೋಫಿಗಳನ್ನು ಬಹುಮಾನವಾಗಿ ಕೊಡಲಾಗುತ್ತಿದೆ.

ಹಿಂದೆ ಕ್ರಿಕೆಟ್ ಅನ್ನು ದೇಶದಲ್ಲಿ ಬಹುವಾಗಿ ಮೆಚ್ಚಲಾಗಿತ್ತು, ಈಗ ಪ್ರೊ ಕಬಡ್ಡಿ ಮೂಲಕ ಕ್ರೀಡಾಳುಗಳ ಮೌಲ್ಯ ಕ್ರಿಕೆಟ್ ನಂತೆ ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು.

ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ಕೆ.ಸಿ ನಾರಾಯಣ ಗೌಡ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರ ಸಭಾಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ನಗರ ಅಧ್ಯಕ್ಷ ಮಹೇಶ್ ಠಾಕೂರ್, ಕೆ.ರಾಘವೇಂದ್ರ ಕಿಣಿ, ಗಿರೀಶ ಅಂಚನ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!