ಕಸ್ತೂರಿ ರಂಗನ್ ವರದಿ: ಬಿಜೆಪಿ ಸುಳ್ಳು ಹೇಳುತ್ತ ಜನತೆಗೆ ನಿರಂತರ ಮೋಸ- ಮಂಜುನಾಥ ಪೂಜಾರಿ
ಹೆಬ್ರಿ : (ಉಡುಪಿಟೈಮ್ಸ್ ವರದಿ)ಕಸ್ತೂರಿರಂಗನ್ ವರದಿ, ಹುಲಿ ಯೋಜನೆಯನ್ನು ನಾವು ಜಾರಿ ಮಾಡಲು ಬಿಡುವುದಿಲ್ಲ ಎಂದು ನಿರಂತರವಾಗಿ ಶಾಸಕರು, ಸಂಸದರು ಹೇಳಿಕೊಂಡು ಬರುತ್ತಿದ್ದರು. ಈಗ ನರೇಂದ್ರ ಮೋದಿ ಸರಕಾರ ಸದ್ದಿಲ್ಲದೆ ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತ 1 ಕಿಮೀ ಪ್ರದೇಶವನ್ನು ಅದರ ಅತೀ ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಎಂದು ನಿಗದಿ ಮಾಡಿದೆ. ಜನರ ಬದುಕಿನ ಹಕ್ಕು ಕಸಿದುಕೊಂಡಿದೆ, ಜನರನ್ನು ಬದುಕಲು ಬಿಡುತ್ತಿಲ್ಲ. ಕಾಂಗ್ರೇಸ್ ಜನರ ಜೊತೆಗೆ ಇದೆ. ಅಂದು ಕೂಡು ಗೋಪಾಲ ಭಂಡಾರಿ ಅವರ ಮೂಲಕ ಜನರ ಪರವಾಗಿ ಹೋರಾಟ ಮಾಡಿದೆ ಇನ್ನೂ ಕೂಡ ಹೋರಾಟ ಮಾಡಲಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿಯಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಕಸ್ತೂರಿ ರಂಗನ್ ವರದಿ ಜಾರಿಯಿಂದ ಇಡೀ ಹೆಬ್ರಿ ತಾಲ್ಲೂಕು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರಲಿದೆ. ಕಾರ್ಕಳ ತಾಲ್ಲೂಕಿನ ಬಹುತೇಕ ಗ್ರಾಮಗಳು ಕಸ್ತೂರಿರಂಗನ್ ವರದಿಯ ವ್ಯಾಪ್ತಿಯಲ್ಲಿ ಸೇರಲಿದೆ. ಸರ್ಕಾರ ಅರಣ್ಯ ಇಲಾಖೆ ಈ ಬಗ್ಗೆ ಚಕಾರವೇ ಎತ್ತುತ್ತಿಲ್ಲ. ಶಾಸಕ ಸುನೀಲ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದೇ ಇಲ್ಲ ಎಂದು ಹೇಳಿದ್ದರು.
ಈಗ ಅವರದ್ದೇ ಬಿಜೆಪಿ ಸರ್ಕಾರ ವರದಿಯನ್ನು ಅನುಷ್ಠಾನ ಮಾಡುತ್ತಿದೆ. ಈ ಬಗ್ಗೆ ರಾಜ್ಯದ ಯಡಿಯೂರಪ್ಪ ಸರ್ಕಾರ, ರಾಜ್ಯದ ಸಂಸದರು ಸಹಿತ ಯಾರೂ ಬಾಯಿ ಬಿಡುತ್ತಿಲ್ಲ. ಸದ್ದಿಲ್ಲದೆ ವರದಿ ಅನುಷ್ಠಾನವಾಗಿದೆ. ಅಂದು ಬಿಜೆಪಿಯ ಕಸ್ತೂರಿ ರಂಗನ್ ವಿರೋಧಿ ಹೋರಾಟಗಾರರೂ ಸುಮ್ಮನಿದ್ದಾರೆ. ಕಸ್ತೂರಿರಂಗನ್ ವರದಿಯ ಅನುಷ್ಠಾನದಿಂದ ನೂರಾರು ವರ್ಷಗಳಿಂದ ವಾಸ ಮಾಡಿಕೊಂಡು ಬರುತ್ತಿರುವ ಮಲೆ ಕುಡಿಯ ಜನಾಂಗ, ಬುಡಕಟ್ಟು ಜನಾಂಗದ ಮನೆಮಂದಿ, ಅರಣ್ಯದ ಅಂಚಿನಲ್ಲಿ ವಾಸ ಮಾಡುವ ಜನತೆಗೆ, ಗ್ರಾಮೀಣ ಪ್ರದೇಶದ ಜನತೆಗೆ ಭಾರೀ ತೊಂದರೆ ಯಾಗಲಿದೆ.ಕಾಂಗ್ರೆಸ್ ನಿರಂತರವಾಗಿ ಜನಪರವಾಗಿ ಜನಸೇವೆಗೆ ದುಡಿಯುತ್ತಿದೆ.
ಕಸ್ತೂರಿರಂಗನ್ ವರದಿಯಿಂದಾಗಿ ಜನತೆ ಯಾವೂದೇ ರೀತಿಯ ತೊಂದರೆ ಆಗಬಾರದು, ಜನತೆಗೆ ಆಗುವ ತೊಂದರೆಯ ಬಗ್ಗೆ ಕಾಂಗ್ರೆಸ್ ಪಕ್ಷ ಜನತೆಗೆ ಸತ್ಯಾಂಶದ ಮನವರಿಕೆ ಮಾಡಿಸಿ ಉಗ್ರವಾದ ಹೋರಾಟ ಮಾಡಲಿದೆ. ಕಸ್ತೂರಿರಂಗನ್ ವರದಿಯಿಂದ ಊರಿನ ಎಲ್ಲಾ ಜನರಿಗೂ ತೊಂದರೆಯಾಗಲಿದೆ. ಬಿಜೆಪಿಗೆ ಜನರ ಕಷ್ಟ ಅರ್ಥ ಆಗಲ್ಲ. ಶಾಸಕರು, ಸಂಸದರು, ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ.
ಕಠಿಣವಾದ ಯೋಜನೆಯು ಜಾರಿಗೆ ಬರುತ್ತಿದ್ದರು ಶಾಸಕ ಸುನೀಲ್ ಕುಮಾರ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಮೌನವಹಿಸಿ ಜನರ ಬದುಕಿನಲ್ಲಿ ಆಟವಾಡುತ್ತಿದ್ದಾರೆ. ಅರಣ್ಯ ಇಲಾಖೆಯ ಮೂಲಕ ಸರ್ಕಾರ ಯಾವೂದೇ ಯೋಜನೆ ಜಾರಿಗೆ ತರುವುದಿದ್ದರೂ ಅದರ ವ್ಯಾಪ್ತಿ ತಲೆತಲಾಂತರದ ಅರಣ್ಯ ಗುಪ್ಪೆ ವ್ಯಾಪ್ತಿಗೆ ಸೀಮಿತವಾಗಬೇಕು. ಅರಣ್ಯ ಗುಪ್ಪೆಯಿಂದ ಈಚೆಗೆ ಯಾವೂದೇ ಯೋಜನೆಯ ವ್ಯಾಪ್ತಿಯ ಗಡಿಯನ್ನು ನಿಗದಿ ಮಾಡಬಾರದು.
ದಯವಿಟ್ಟು ಕಸ್ತೂರಿರಂಗನ್ ವರದಿಯನ್ನು ನಿಲ್ಲಿಸಿ ಜನರನ್ನು ಬದುಕಲು ಬಿಡಿ, ಮಾತಿನಂತೆ ನಡೆದ ಸಿದ್ಧರಾಮಯ್ಯ : ಸಿದ್ಧರಾಮಯ್ಯ ಸರ್ಕಾರದ ಕಸ್ತೂರಿ ರಂಗನ್ ವರದಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ಬಿಡುವುದಿಲ್ಲ, ಎಂದು ಮಾತುಕೊಟ್ಟು ಕಾಂಗ್ರೆಸ್ ನ ಸಿದ್ಧರಾಮಯ್ಯ ಸರ್ಕಾರದ ಇರುವ ತನಕ ಕರ್ನಾಟಕದಲ್ಲಿ ಕಸ್ತೂರಿರಂಗನ್ ವರದಿ ಜಾರಿ ಮಾಡಲಿಲ್ಲ. ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ನೇತ್ರತ್ವದಲ್ಲಿ ಉಡುಪಿ ಜಿಲ್ಲೆಯಾಧ್ಯಂತ ಸಂಚಾರ ಜನರ ಭಾವನೆ ತಿಳಿದು ಕಸ್ತೂರಿ ರಂಗನ್ ವ್ಯಾಪ್ತಿ ಅರಣ್ಯ ಗುಪ್ಪೆಗೆ ಸಿಮೀತವಾಗಬೇಕು ಎಂಬ ಜನಾಭಿಪ್ರಾಯ ಸಂಗ್ರಹಿಸಿ ಸಿದ್ಧರಾಮಯ್ಯ ಮೂಲಕ ಕೇಂದ್ರ ಸರ್ಕಾರದ ಮನವಿ ಮಾಡಿದ್ದರು. ಈಗ ನಾವು ಜನರೊಂದಿಗೆ ಇರುತ್ತೇವೆ ಎನ್ನುವ ಬಿಜೆಪಿಯವರೇ ಸರ್ಕಾರದ ಮೂಲಕ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತರುತ್ತಿದ್ದಾರೆ ತರುತ್ತಿದ್ದಾರೆ. ಅದರ ವ್ಯಾಪ್ತಿಯನ್ನು 1 ಕಿಮೀ ಅತೀ ಸೂಕ್ಷ್ಮ ಪ್ರದೇಶ ಎಂದು ಗಡಿ ನಿಗದಿ ಮಾಡಿದ್ದಾರೆ.
ವ್ಯಾಪ್ತಿ ನಿಗದಿ ಜನತೆಗೆ ಅತ್ಯಂತ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ಜನತೆಗೆ ಬಿಜೆಪಿಯ ಮೋಸ ಇನ್ನೂ ಅರ್ಥವಾಗುತ್ತಿಲ್ಲ. ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಒಂದು ಸುಳ್ಳನ್ನು ಬಿಜೆಪಿಯವರು ನೂರು ಸಲ ಹೇಳಿ ಸತ್ಯ ಮಾಡಲು ಪ್ರಯತ್ನಿಸಿ ಜನತೆಗೆ ಮೋಸ ಮಾಡುತ್ತಿದ್ದಾರೆ. ಏನೇ ಆದರೂ ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು, ಜನರನ್ನು ಸಂಕಷ್ಟದಿಂದ ದೂರ ಮಾಡಿ ಎಂದರು ಮಂಜುನಾಥ ಪೂಜಾರಿ ಒತ್ತಾಯಿಸಿದರು.
ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೂ ರಾಜ್ಯದ ಒಬ್ಬರೂ ಸಂಸದರೂ ಕೂಡ ವಿರೋಧ ಮಾಡದೇ ಇದ್ದುದು ನಮ್ಮ ದೌಭಾಗ್ಯ, ಜನತೆಗೆ ಬಿಜೆಪಿ ಅನ್ಯಾಯ ಮಾಡಿದರೆ ಸಹಿಸಲು ಸಾಧ್ಯವಿಲ್ಲ, ಹೋರಾಟ ಮಾಡಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೇಸ್ ನಾಯಕ ಸೀತಾನದಿ ರಮೇಶ್ ಹೆಗ್ಡೆ, ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಸುರೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್, ಪ್ರಮುಖರಾದ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಗುಳ್ಕಾಡು ಭಾಸ್ಕರ ಶೆಟ್ಟಿ, ಕಾಸನ ಮಕ್ಕಿ ಶಿವರಾಮ ಪೂಜಾರಿ, ಮುದ್ರಾಡಿ ಶಶಿಕಲಾ ಡಿ.ಪೂಜಾರಿ, ಶಶಿಕಲಾ ಆರ್ ಪಿ, ಶಂಕರ ಸೇರಿಗಾರ್, ವಿವಿಧ ಪ್ರಮುಖರು ಭಾಗವಹಿಸಿದ್ದರು.