ಕೋಟ: ಆರ್ ಟಿಐ ಕಾರ್ಯಕರ್ತನ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ ಅಕ್ರಮ ಮರಳು ದಂಧೆಕೋರರು
ಕೋಟ: ಮರಳುಗಾರಿಕೆ ನಿರತ ತಂಡವೊಂದು ಮಾಹಿತಿ ಹಕ್ಕು ಕಾರ್ಯಕರ್ತನ ಮನೆಗೆ ಮಾರಕಾಸ್ತ್ರ,ದೊಣ್ಣೆ ಸಹಿತ ಅಕ್ರಮವಾಗಿ ಮನೆಗೆ ಪ್ರವೇಶಿಸಿ ದಾಳಿ ನಡೆಸಲು ಮುಂದಾದ ಘಟನೆ ಸಾಸ್ತಾನ ಸಮೀಪದ ಐರೋಡಿಯಲ್ಲಿ ಶನಿವಾರ ನಡೆದಿದೆ.
ಶನಿವಾರ ಬೆಳಿಗ್ಗೆ ಆರ್‌ಟಿಐ ಕಾರ್ಯಕರ್ತ ಥೋಮಸ್ ರೋಡಿಗ್ರಸ್ ಅವರ ಮನೆಗೆ ಅಕ್ರಮ ಮರಳು ದಂಧೆ ನಡೆಸುತ್ತಿರುವ ಅರಾಟೆ ರಾಘವೇಂದ್ರ ಆಚಾರ್ಯ, ಕುಂಜಾಲು ಮನೋಜ್ ಆಚಾರ್ಯ, ಮೊವಾಡಿಯ ಸದಾ ಹಾಗೂ ನಾಗರಾಜ ಮೊವಾಡಿ, ರವಿ ಮೊಗವೀರ ಸೇನಾಪುರ, ಚಂದ್ರ ಅರಾಟೆ ಮೊದಲಾದವರು ದಾಳಿ ನಡೆಸುವುದಕ್ಕಾಗಿ ಏಕಾಏಕಿ ಅಕ್ರಮ ಪ್ರವೇಶಗೈದು ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ
ಹೊಸಾಡು ಸೇನಾಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ವಿರೋಧಿಸಿ ಥೋಮಸ್ ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವಂತೆ, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಇದರಿಂದ ತನಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.
ಆರೋಪಿಗಳು ಮನೆಯಂಗಳದಲ್ಲಿ ಗಲಾಟೆ ನಡೆಸುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಥೋಮಸ್ ಅವರ ವಿರುದ್ಧವೂ ಆ ತಂಡದವರು ಪ್ರತಿ ದೂರು ದಾಖಲಿಸಿದ್ದು ಅದು ಪ್ರಕರಣ ದಾಖಲಾಗಲಿದೆ ಎಂದು ತಿಳಿದುಬಂದಿದೆ.