ಸಿಎಂ ಹಾಗೂ ಸಚಿವರ ಮೇಲೆ ಶೇ.40 ಕಮಿಷನ್ ಆರೋಪ- ಡಿ.ಕೆಂಪಣ್ಣ ಬಂಧನ
ಬೆಂಗಳೂರು: ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರು ಶೇ 40ರಷ್ಟು ಕಮಿಷನ್ ಪಡೆಯುತ್ತಾರೆ’ ಎಂಬ ಆರೋಪಿಸಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿ ಹಲವರನ್ನು ಕೇಂದ್ರ ವಿಭಾಗದ ಪೊಲೀಸರು ಕಳೆದ ರಾತ್ರಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೆಂಪಣ್ಣ ಹಾಗೂ ಇತರೆ 18 ಮಂದಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡಿದ್ದಾರೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೆಂಪಣ್ಣ ಸೇರಿ 19 ಮಂದಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿತ್ತು.
ನೋಟಿಸ್ ನೀಡಿದ ಬಳಿಕವೂ 19 ಮಂದಿ ವಿಚಾರಣೆಗೆ ಗೈರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಎಲ್ಲರ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು. ಎಲ್ಲರನ್ನೂ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತ್ತು.
ಕೆಂಪಣ್ಣ ಸೇರಿ ಕೆಲವರನ್ನು ಬಂಧಿಸಲಾಗಿದೆ. ಎಲ್ಲರನ್ನೂ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ನ್ಯಾಯಾಲಯದ ನಿರ್ದೇಶನದನ್ವಯ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದರು.