ಕಾಪು: ಸ್ಕೂಟರ್ ನ ಡಿಕ್ಕಿಯಲ್ಲಿದ್ದ 6 ಲಕ್ಷ ರೂ. ಹಣವಿದ್ದ ಬ್ಯಾಗ್ ಕಳವು
ಕಾಪು ಡಿ23 (ಉಡುಪಿ ಟೈಮ್ಸ್ ವರದಿ): ಹಾಲು ಕೇಳುವ ನೆಪದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಸ್ಕೂಟರ್ ನ ಡಿಕ್ಕಿಯಲ್ಲಿದ್ದ 6 ಲಕ್ಷ ರೂ ಹಣವಿದ್ದ ಬ್ಯಾಗ್ ನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಕಾಪು ಪೇಟೆಯಲ್ಲಿ ನಡೆದಿದೆ.
ಕಾಪುವಿನ ಉಳಿಯಾರಗೋಳಿ ಗ್ರಾಮದ ನಿವಾಸಿ ರಾಘವೇಂದ್ರ ಕಿಣಿ ಅವರು ಕಾಪು ಪೇಟೆಯಲ್ಲಿ ಮಹಾಲಸಾ ಎಂಬ ಹಾರ್ಡ್ ವೇರ್ ಅಂಗಡಿಯನ್ನು ನಡೆಸಿಕೊಂಡಿದ್ದರು. ಡಿ.22 ರಂದು ರಾತ್ರಿ ವೇಳೆ ವ್ಯವಹಾರದ 3 ಲಕ್ಷವನ್ನು ಲೆಕ್ಕಮಾಡಿ ಅದರೊಂದಿಗೆ ಡಿ.21 ರ 3 ಲಕ್ಷ ಸೇರಿ ಒಟ್ಟು 6 ಲಕ್ಷ ಹಣವನ್ನು ಹಾಗೂ ವ್ಯವಹಾರದ ಬಿಲ್ಲುಗಳನ್ನು ಒಂದು ಬ್ಯಾಗಿನಲ್ಲಿ ಹಾಕಿ ಅದನ್ನು ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ್ದ ಅವರ ಸ್ಕೂಟರ್ ನ ಡಿಕ್ಕಿಯಲ್ಲಿ ಹಾಕಿದ್ದರು. ಬಳಿಕ ಅಂಗಡಿಗೆ ಬೀಗ ಹಾಕುವ ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಗಡಿಯ ಬಳಿ ಬಂದಿದ್ದರು. ಈ ಪೈಕಿ ಓರ್ವ ವ್ಯಕ್ತಿ ಹಾಲು ಕೇಳುವ ಸೋಗಿನಲ್ಲಿ ಅಂಗಡಿಗೆ ಬಂದಿದ್ದು, ಇನ್ನೋರ್ವ ವ್ಯಕ್ತಿ ಹಣವಿರಿಸಿದ್ದ ಸ್ಕೂಟರ್ ಬಳಿ ನಿಂತಿದ್ದನು.
ಬಳಿಕ ರಾಘವೇಂದ್ರ ಕಿಣಿ ಅವರು ಮನೆಗೆ ಹೋದ ಬಳಿಕ ಸ್ಕೂಟರ್ ನಲ್ಲಿದ್ದ ಹಣವನ್ನು ತೆಗೆಯಲು ಸ್ಕೂಟರ್ ನ ಡಿಕ್ಕಿ ತೆರೆದು ನೋಡಿದಾಗ ಹಣದ ಬ್ಯಾಗ್ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಈ ವೇಳೆ ತಕ್ಷಣ ಅವರು ಮತ್ತೆ ಅಂಗಡಿಯ ಬಳಿ ಹೋಗಿ ಅಂಗಡಿಯಲ್ಲಿ ಅಳವಡಿಸಿದ್ದ ಸಿ.ಸಿ ಟಿವಿ ಪೂಟೇಜ್ ನ್ನು ನೋಡಿದಾಗ ಹಾಲು ಕೇಳಲು ಬಂದಿದ್ದ ವ್ಯಕ್ತಿಗಳ ಪೈಕಿ ಸ್ಕೂಟರ್ ಬಳಿ ನಿಂತಿದ್ದ ವ್ಯಕ್ತಿ ಹಣದ ಬ್ಯಾಗ್ ನ್ನು ಕಳವು ಮಾಡಿದ್ದು, ಬಳಿಕ ಆರೋಪಿಗಳು ಕಾಪು ಪೇಟೆ ಕಡೆಗೆ ಹೋಗಿರುವ ದೃಶ್ಯಾವಳಿಗಳು ಕಂಡುಬಂದಿರುತ್ತದೆ. ಈ ಬಗ್ಗೆ ರಾಘವೇಂದ್ರ ಕಿಣಿ ಅವರು ನೀಡಿದ ಸೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.