ರಾಷ್ಟ್ರೀಯ ಯುವ ಜನೋತ್ಸವ: ಲೋಗೋ ರಚಿಸಿ, 50,000 ರೂ. ಬಹುಮಾನ ಗೆಲ್ಲಿ
ಬೆಂಗಳೂರು: 26ನೇ ರಾಷ್ಟ್ರ ಮಟ್ಟದ ಯುವ ಜನೋತ್ಸವದ ಲೋಗೋವನ್ನು ಅದ್ಭುತವಾಗಿ ರಚಿಸಿದವರಿಗೆ 50,000 ರೂ. ಬಹುಮಾನ ನೀಡುವುದಾಗಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಘೋಷಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಡಾ.ನಾರಾಯಣಗೌಡ, ಲೋಗೋ, ಮಸ್ಕಟ್ ಹಾಗೂ ಥೀಮ್ ರಚಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ತಿಳಿಸಿದರು. ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೂ ರಾಷ್ಟ್ರ ಮಟ್ಟದ ಯುವ ಜನೋತ್ಸವ ನಡೆಯಲಿದ್ದು, ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ದೇಶದ ಎಲ್ಲಾ ರಾಜ್ಯಗಳಿಂದ 7,500 ಯುವ ಕಲಾವಿದರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷ ಲೋಗೋ, ಮಸ್ಕಟ್, ಥೀಮ್ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಲೋಗೋ ರಚನಾ ಸ್ಪರ್ಧೆ ಏರ್ಪಡಿಸಲಾಗಿದ್ದು, ಡಿಸೆಂಬರ್ 28, ಸಂಜೆ 6 ಗಂಟೆವರೆಗೂ ಗಡುವು ನೀಡಲಾಗಿದೆ. ಆಯ್ಕೆ ಸಮಿತಿ ಆಯ್ಕೆ ಮಾಡುವ ಅತ್ಯುತ್ತಮ ಲೋಗೋ, ಮಸ್ಕಟ್ ವಿನ್ಯಾಸಕಾರರಿಗೆ 50 ಸಾವಿರ ನಗದು ಹಾಗೂ ಅತ್ಯುತ್ತಮ ಥೀಮ್ ರಚಿಸಿದವರಿಗೆ 25 ಸಾವಿರ ನಗದು ಬಹುಮಾನ ನೀಡಲಾಗುವುದು. ಜೊತೆಗೆ 26 ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಬಳಸಿಕೊಳ್ಳಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.