ಕೊರೋನಾ: ಚೀನಾವನ್ನು ಹಿಂದಿಕ್ಕಿದ ಭಾರತ, 85 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ
ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ದೇಶದಲ್ಲಿ 24 ಗಂಟೆಗಳಲ್ಲಿ 3970 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 85,970ಕ್ಕೆ ತಲುಪಿದೆ. ಈ ಮೂಲಕ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಚೀನಾವನ್ನು ಭಾರತ ಹಿಂದಿಕ್ಕಿದೆ.
ಇದರ ಜೊತೆಗೆ ಅತೀ ಹೆಚ್ಚು ಸೋಂಕಿತರು ಇರುವ ವಿಶ್ವದ ದೇಶಗಳ ಪೈಕಿ 11ನೇ ಸ್ಥಾನಕ್ಕೂ ಏರಿದೆ. ಪ್ರಸ್ತುತ 1.16ಲಕ್ಷ ಸೋಂಕಿತರೊಂದಿಗೆ ಇರಾನ್ 10ನೇ ಸ್ಥಾನದಲ್ಲಿದೆ. ಇದೇ ಪ್ರಮಾಣದಲ್ಲಿ ಸೋಂಕಿತರು ಪ್ರತಿನಿತ್ಯ ಪತ್ತೆಯಾಗುತ್ತಾ ಹೋದರೆ, ಇರಾನ್ ದೇಶವನ್ನೂ ಭಾರತ ಹಿಂದಿಕ್ಕುವ ದಿನಗಳು ತೀರಾ ದೂರವೇನೂ ಇಲ್ಲ.
ಭಾರತದಲ್ಲು ಶುಕ್ರವಾರ ಒಂದೇ ದಿನ 3970 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೆ, 24 ಗಂಟೆಗಳಲ್ಲಿ 103 ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆ 2752ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಈ ನಡುವೆ 85940 ಮಂದಿ ಸೋಂಕಿತರ ಪೈಕಿ 30153 ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ ಇನ್ನೂ 53035 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ.
2019ರ ನ.17ರಂದು ಚೀನಾದಲ್ಲಿ ಮೊದಲ ಕೊರೋನಾ ಕೇಸು ಪತ್ತೆಯಾಗಿತ್ತು. ಈ ನಡುವೆ ಮೃತರ ಸಂಖ್ಯೆಯಲ್ಲಿ ಭಾರತದ ಚೀನಾ ಮಟ್ಟಕ್ಕೆ ತಲುಪಿಲ್ಲ ಎಂಬುದು ತುಸು ಸಮಾಧಾನಕರ ವಿಚಾರವಾಗಿದೆ. ಈ ಹಂತದಲ್ಲಿ ಚೀನಾದಲ್ಲಿ ಸಾವಿನ ಸಂಖ್ಯೆ ಶೇ. 5.5ರಷ್ಟಿತ್ತು. ಆದರೆ, ಭಾರತದಲ್ಲಿ ಶೇ.3.2ರಷ್ಟಿದೆ.