ಅಭ್ಯರ್ಥಿ ಆಯ್ಕೆಗಾಗಿ ಅರ್ಜಿಗಳನ್ನು ಜಿಲ್ಲೆಗಳಿಗೆ ರವಾನಿಸಲಾಗಿದೆ- ಡಿ.ಕೆ ಶಿವಕುಮಾರ್

ಬೆಂಗಳೂರು, ಡಿ 21: ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ಮೂಡಿಸಿ ಅಭ್ಯರ್ಥಿ ಆಯ್ಕೆಗಾಗಿ ಅರ್ಜಿಗಳನ್ನು ಸ್ಥಳೀಯ ಜಿಲ್ಲೆಗಳಿಗೆ ರವಾನಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಇರುತ್ತಾರೆ. ಬೇರೆ ಪಕ್ಷಗಳು ಸೋಲುತ್ತವೆ ಎಂದು ಆ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಕಡಿಮೆ ಇದ್ದಾರೆ. ಕಾಂಗ್ರೆಸ್ ಗೆಲ್ಲುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ಮೂಡಿಸಿ ಅಭ್ಯರ್ಥಿ ಆಯ್ಕೆಗಾಗಿ ಅರ್ಜಿಗಳನ್ನು ಸ್ಥಳೀಯ ಜಿಲ್ಲೆಗಳಿಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಪಂಚಮಶಾಲಿ ಮೀಸಲಾತಿ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಲುವೆನು ಎಂದು ಕೇಳಿದಾಗ, ‘ನಮ್ಮ ನಾಯಕರು ಈ ವಿಚಾರವಾಗಿ ಮಾತನಾಡಿದ್ದಾರೆ. ಉಳಿದಂತೆ ಯಾರೂ ಬಂದು ನಮ್ಮ ಬಳಿ ಚರ್ಚೆ ಮಾಡಿಲ್ಲ. ಸರ್ಕಾರ ಮೊದಲು ನಿಲುವು ಪ್ರಕಟಿಸಲಿ. ಕಾನೂನು ಅಡಚಣೆಗಳೇನು ಎಂಬುದು ಗೊತ್ತಿಲ್ಲ. ಈ ವಿಚಾರವಾಗಿ ಆಡಳಿತ ಪಕ್ಷ ತೀರ್ಮಾನ ಮಾಡಬೇಕು. ಕಾನೂನು ಏನಿದೆ ಎಂದು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು. ಮೀಸಲಾತಿ ಹೆಚ್ಚಳ ಮಾಡುವಂತೆ ಬಹಳ ಸಮಾಜಗಳು ಒತ್ತಾಯ ಮಾಡುತ್ತಿವೆ.

ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಕುರುಬರು ಹೋರಾಟ ಮಾಡುತ್ತಿದ್ದಾರೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ 50 % ಮಿತಿ ಮೀರಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಸಚಿವರು ಉತ್ತರ ನೀಡಿದ್ದಾರೆ. ಹೀಗೆ ಮೀಸಲಾತಿ ವಿಚಾರ ಗೊಂದಲದ ಗೂಡಾಗಿದೆ. ಹೀಗಾಗಿ ಕಾನೂನು ಅಂಶಗಳನ್ನು ಅರಿಯಲು ಎಐಸಿಸಿಯಿಂದ ಒಂದು ಸಮಿತಿ ಮಾಡಲಾಗಿದೆ. ನಾವೆಲ್ಲ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!