ನಾವು ಹುಟ್ಟುತ್ತಲೇ ಹಿಂದೂಗಳು, ಬಿಜೆಪಿಯವರದ್ದು ನಾಟಕದ ಹಿಂದುತ್ವ- ಡಿ.ಕೆ.ಶಿವಕುಮಾರ್

ಬೆಳಗಾವಿ, ಡಿ.19: ನಾವು ಹುಟ್ಟುತ್ತಲೇ ಹಿಂದೂಗಳು ಆದರೆ ಬಿಜೆಪಿಯವರದ್ದು ನಾಟಕದ ಹಿಂದುತ್ವ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ನಾಡಿನ ಮಹನೀಯರ ಭಾವಚಿತ್ರಗಳನ್ನು ಅಳವಡಿಸಬೇಕು ಎಂದು ಕಾಂಗ್ರೆಸ್ ನಾಯಕರು ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಇಂದು ಮಹನೀಯರ ಭಿತ್ತಿಚಿತ್ರ ಹಿಡಿದು ಪ್ರದರ್ಶನ ನಡೆಸಿದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ ಅವರು,  ಹುಟ್ಟುವಾಗಲೂ, ಸಾಯುವಾಗಲೂ ನಾವು ಹಿಂದೂಗಳೇ. ಹಿಂದೂ ಆಚರಣೆಗಳನ್ನೇ ಪಾಲಿಸುತ್ತಾ ಬಂದವರು. ಆದರೆ ಬಿಜೆಪಿಯವರದ್ದು ಕೇವಲ ನಾಟಕದ ಹಿಂದುತ್ವ ಎಂದು ಟೀಕಿಸಿದ್ದಾರೆ.

ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳ ಅನಾವರಣ ಕಾರ್ಯಕ್ರಮ ಇಂದು ಬೆಳಗ್ಗೆ 10 ಗಂಟೆಗೆ ಇದ್ದು, ಆಗಮಿಸಬೇಕೆಂದು ಸ್ಪೀಕರ್‍ ಕಚೇರಿಯಿಂದ ನನಗೆ ಕರೆ ಮಾಡಿ ತಿಳಿಸಿದ್ದರು. ಖುಷಿಯಿಂದಲೇ ನಾವು ಬಂದರೆ ಇಲ್ಲಿ ಸಾವರ್ಕರ್ ಭಾವಚಿತ್ರವನ್ನೂ ಹಾಕಲಾಗುತ್ತಿದೆ. ರಾಜ್ಯಕ್ಕೆ ಸಂಬಂಧವಿಲ್ಲದ ಸಾವರ್ಕರ್‍ ಫೋಟೋ ಹಾಕಿರುವುದು ವಿವಾದಾತ್ಮಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಗೂ ದೇಶದ ಮೊದಲ ಪ್ರಧಾನಿ, ಆಧುನಿಕ ಭಾರತದ ನಿರ್ಮಾತೃ ಪಂಡಿತ್ ಜವಹಾರ್ ಲಾಲ್ ನೆಹರೂ, ಶಿಶುನಾಳ ಷರೀಫರು, ವಿಶ್ವಗುರು ಬಸವಣ್ಣ, ನಾರಾಯಣಗುರು, ಕನಕದಾಸರು, ಅಂಬೇಡ್ಕರ್, ಬಾಬು ಜಗಜೀವನ ರಾಮ್, ಸರ್ದಾರ್ ವಲ್ಲಭಬಾಯ್ ಪಟೇಲ್, ಕುವೆಂಪು ಸೇರಿದಂತೆ ಮಹನೀಯರ ಭಾವಚಿತ್ರಗಳನ್ನು ಸುವರ್ಣಸೌಧದಲ್ಲಿ ಅಳವಡಿಸಬೇಕು ಎಂದು  ಆಗ್ರಹಿಸಿದ್ದಾರೆ.

ಇದೇ ವೇಳೆ ಅವರು, ನಾರಾಯಣಗುರು, ಕುವೆಂಪು, ಬಸವಣ್ಣ, ಕನಕದಾಸರು, ವಾಲ್ಮೀಕಿ ಎಲ್ಲರೂ ನಮಗೆ ಬೇಕು. ರಾಜ್ಯ, ದೇಶಕ್ಕೆ ಹಿತಬಯಸಿ ಶ್ರಮಿಸಿ ಅಮರರಾದ ಎಲ್ಲಾ ಧರ್ಮದ ನಾಯಕರೂ ನಮ್ಮವರೇ ಎಂಬ ಅಜೆಂಡಾ ನಮ್ಮದು. ಆದರೆ ಭ್ರಷ್ಟಾಚಾರ, 40% ಕಮಿಷನ್ ಮುಂತಾದ ವೈಫಲ್ಯಗಳನ್ನು ಮುಚ್ಚಿ ಹಾಕಲು ಭಾವಚಿತ್ರ ಅಳವಡಿಸುವ ಕೆಲಸವನ್ನು ಈಗ ಬಿಜೆಪಿ ಮಾಡುತ್ತಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!