ಡಿ.ಕೆ ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದ್ದು, ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಶನಲ್ ಎಜುಕೇಶನ್ ಫೌಂಡೇಶನ್ ಮೇಲೆ ದಾಳಿ ನಡೆದಿದೆ.
ಡಿ.ಕೆ ಶಿವಕುಮಾರ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗಹಿಸಿದ್ದು, ಇದೇ ಸಂದರ್ಭದಲ್ಲಿ ಇತ್ತ ಬೆಂಗಳೂರಿನಲ್ಲಿ ಸಿಬಿಐ ದಾಳಿ ನಡೆಸಿದೆ. ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಈ ಹಿಂದೆ ಕೂಡ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಇಡಿ, ಆದಾಯ ತೆರಿಗೆ ಅಧಿಕಾರಿಗಳು,ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ಅವರನ್ನು ಸದ್ಯ ವಿಚಾರಣೆ ನಡೆಸುತ್ತಿದೆ. ಡಿಕೆ ಶಿವಕುಮಾರ್ ಅವರು ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಅವರ ಮಗಳಾದ ಐಶ್ವರ್ಯ ಅವರು ಕಾರ್ಯದರ್ಶಿಯಾಗಿದ್ದಾರೆ. ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ದಾಳಿ ನಡೆದಿದೆ ಎನ್ನಲಾಗಿದೆ.
ದಾಳಿ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ‘ಇಂದು ದಾಳಿ ವೇಳೆಯಲ್ಲಿ ನಮ್ಮ ಟ್ರಸ್ಟಿಗಳನ್ನು ಭೇಟಿ ಮಾಡಿ, ಕೆಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನನ್ನ ವಕೀಲರಿಗೆ ಕೂಡ ನಾನು ನೀಡಿರುವ ಹಣಕ್ಕೆ ಸಂಬಂಧಪಟ್ಟಂತೆ ನೋಟಿಸ್ ನೀಡಿದ್ದಾರೆ. ಇದಲ್ಲದೇ ನಮ್ಮ ಊರಿಗೆ ತೆರಳಿ ಅಲ್ಲಿರುವ ಜಮೀನು ಹಾಗೂ ಮನೆಯನ್ನು ಸುತ್ತು ಹಾಕಿ ತಹಶಿಲ್ದಾರ್ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ನನ್ನ ವಿರುದ್ದ ಕೇಸ್‌ಗಳು ನಡೆಯುತ್ತಿದ್ದು, ಎಲ್ಲಾ ಕಡೆಯಿಂದ ನನಗೆ ತೊಂದ್ರೆ ನೀಡುತ್ತಿದ್ದಾರೆ ಎಂದು ಹೇಳಿದರು.
ಸಿಬಿಐ ದಾಳಿಯಿಂದ ನನಗೆ ಯಾವುದೇ ಭಯವಿಲ್ಲ, ನಾನು ತಪ್ಪು ಮಾಡಿಲ್ಲ. ಹೆಚ್ ವಿಶ್ವನಾಥ್ ಬಗ್ಗೆ ಇತ್ತೀಚಿಗೆ ಹಣಕಾಸಿನ ಬಗ್ಗೆ ರಾಜರೋಷವಾಗಿ ಹೇಳಿದ್ದರು ಕೂಡ ಯಾರು ಈ ಬಗ್ಗೆ ಮಾತನಾಡಿಲ್ಲ.ವಿರೋಧಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಬಿಜೆಪಿ ಮುಂದಾಗಿದ್ದು, ಈ ಬಗ್ಗೆ ನ್ಯಾಯಾಲಯ, ಜನತೆಗಳ ಜೊತೆಗೆ ನಾವು ಹೋಗುತ್ತೆವೆ ಎಂದು ಹೇಳಿದರು.
ಎರಡು ದಿನಗಳ ಹಿಂದೆ ಮಾಧ್ಯಮಗಳ ಜೊತೆಗೆ ಕೊಪ್ಪಳದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಚುನಾವಣೆ ಹಿನ್ನಲೆಯಲ್ಲಿ ನನಗೆ ಸೇರಿದಂಥ ಹಲವರಿಗೆ ಸಿಬಿಐ ತೊಂದರೆ ಕೊಡುತ್ತಿದೆ ಎಂದು ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.