ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 274 ಸಹ ಪ್ರಾಧ್ಯಾಪಕರಿಗೆ ಬಡ್ತಿ- ಸಚಿವ ಅಶ್ವತ್ಥ್ ನಾರಾಯಣ್
ಬೆಂಗಳೂರು: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 274 ಸಹ ಪ್ರಾಧ್ಯಾಪಕರಿಗೆ (ಅಸೋಸಿಯೇಟ್ ಪ್ರೊಫೆಸರ್ಸ್) ಪ್ರಾಧ್ಯಾಪಕರಾಗಿ ಬಡ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಸರಕಾರದ ಈ ನಿರ್ಧಾರದಿಂದ 274 ಸಹ ಪ್ರಾಧ್ಯಾಪಕರಿಗೆ ಮುಂಬಡ್ತಿ ಸಿಗಲಿದೆ. ಉನ್ನತ ಶಿಕ್ಷಣ ಇಲಾಖೆಯ ಭಾಗವಾಗಿರುವ ವೃತ್ತಿ ಸುಧಾರಣೆ ಆಯ್ಕೆ ಸಮಿತಿಯ ತೀರ್ಮಾನದ ಮೇಲೆ ಈ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಿದರು.
ಯುಜಿಸಿ ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಗಳಾಗಿ ಬಡ್ತಿ ನೀಡಬಹುದೆಂದು 2010ರಲ್ಲೇ ಹೇಳಿದೆ. ಆದರೆ ಕಳೆದ 12 ವರ್ಷಗಳಿಂದ ಈ ವಿಚಾರದಲ್ಲಿ ಯಾವ ಪ್ರಗತಿಯೂ ಆಗಿರಲಿಲ್ಲ. ಈಗ ಸರಕಾರವು 274 ಅಸೋಸಿಯೇಟ್ ಪ್ರೊಫೆಸರುಗಳಿಗೆ ಬಡ್ತಿ ನೀಡಲು ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದ್ದಾರೆ.