ಮುಂದಿನ ಆರು ತಿಂಗಳು ಗರ್ಭ ಧರಿಸಬೇಡಿ- ಮಹಿಳೆಯರಿಗೆ ಆರೋಗ್ಯ ಇಲಾಖೆ ಸಲಹೆ
ರಾಯಚೂರು, ಡಿ 15: ರಾಜ್ಯದಲ್ಲಿ ರಾಯಚೂರಿನಲ್ಲಿ ಮೊದಲ ಝೀಕಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ವೈರಸ್ ಹರಡುವ ಆತಂಕದ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳ ಕಾಲ ಗರ್ಭ ಧರಿಸದಂತೆ ಮಹಿಳೆಯರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಝೀಕಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಯಚೂರ್ ನ ಆಸ್ಪತ್ರೆ ಗಳಲ್ಲಿ ತಪಾಸಣೆಗೆಂದು ಬರುವವರ ಸಂಖ್ಯೆ ಹೆಚ್ಚಿದೆ. ಇನ್ನು ಕಳೆದ ವಾರ 5 ವರ್ಷದ ಬಾಲಕಿಯಲ್ಲಿ ಝೀಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ 57 ಮಂದಿ ಗರ್ಭಿಣಿಯರ ರಕ್ತದ ಸ್ಯಾಂಪಲ್ ಗಳನ್ನು ಆರೋಗ್ಯ ಇಲಾಖೆ ಸಂಗ್ರಹಿಸಿದ್ದು, ಇದನ್ನು ಪರೀಕ್ಷೆಗೆ ಕಳುಹಿಸಿದೆ. ಅಲ್ಲದೆ ಅಗತ್ಯ ಮುನ್ನೆಚ್ಚರಿಕೆಗೆ ಸೂಚಿಸಿದೆ.
ಮಹಿಳೆಯರಿಗೆ ಮುಂದಿನ ಆರು ತಿಂಗಳವರೆಗೆ ಗರ್ಭ ಧರಿಸದಂತೆ ಸಲಹೆ ನೀಡಲಾಗಿದೆ.ಗರ್ಭಿಣಿಯಿಂದ ಗರ್ಭದಲ್ಲಿರುವ ಮಗುವಿಗೆ ಸುಲಭವಾಗಿ ವೈರಸ್ ಹಬ್ಬುತ್ತದೆ ಮತ್ತು ವೈರಸ್ ಬಾಧಿಸಿದಲ್ಲಿ ಮಗುವಿನಲ್ಲಿ ಗಂಭೀರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟ ಕಾರಣ ಮುಂಜಾಗ್ರತಾ ಕ್ರಮವಾಗಿ ಇಲಾಖೆ ಈ ಸಲಹೆ ಮಾಡಿದೆ.ಇನ್ನು ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಸಿಬಂದಿ ಸರ್ವೇ ಕಾರ್ಯ ನಡೆಸುತ್ತಿದ್ದು, ಜನರಿಗೆ ಮಾಹಿತಿ ನೀಡಿ ಕಾಂಡೋಮ್ ವಿತರಿಸುತ್ತಿದ್ದಾರೆ.
ಝೀಕಾ ವೈರಸ್ ಬಾಧಿಸಿದಲ್ಲಿ ಹುಟ್ಟುವ ಮಗು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವ ಸಾಧ್ಯತೆಗಳಿರುವ ಹಿನ್ನೆಲೆ ಯಲ್ಲಿ ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವಂತೆ ಮನವಿ ಮಾಡಲಾಗುತ್ತಿದೆ. ಫ್ಲೇಮಿ ವೈರಸ್ ಗುಂಪಿಗೆ ಸೇರಿದ ಜಿಕಾ ವೈರಸ್ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಈಡೀಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಇನ್ನು ವೈರಸ್ ಹಳದಿ ಜ್ವರ, ಜಪಾನೀಸ್ ಎನ್ಸೆಲೈಟಿಸ್ ಮತ್ತು ವೆಸ್ಟ್ ನೈಲ್ ವೈರಸ್ ಗಳೊಂದಿಗೂ ಸಂಬಂಧ ಹೊಂದಿದೆ ಎನ್ನಲಾಗಿದೆ.