ತೀವ್ರಗೊಂಡ ಹಕ್ಕಿಜ್ವರ- 8 ಸಾವಿರ ಪಕ್ಷಿಗಳನ್ನು ಕೊಲ್ಲಲು ಆದೇಶ
ಕೊಟ್ಟಾಯಂ: ಜಿಲ್ಲೆಯ ಎರಡು ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಸುಮಾರು ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ 8 ಸಾವಿರ ಬಾತುಕೋಳಿ, ಕೋಳಿ ಮತ್ತು ಇತರ ಪಕ್ಷಿಗಳನ್ನು ಕೊಲ್ಲಲು ಸೂಚಿಸಲಾಗಿದೆ.
ಅರ್ಪೂಕರ ಹಾಗೂ ತಾಳಯಾಳಂ ವ್ಯಾಪ್ತಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಕಾರಣ ಜಿಲ್ಲಾಧಿಕಾರಿ ಪಿ.ಕೆ.ಜಯಶ್ರೀ ಅವರು ಡಿ.13ರಂದು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ಕರೆದು ಚರ್ಚಿಸಿದ್ದು, ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿರುವ 8 ಸಾವಿರ ಬಾತುಕೋಳಿ, ಕೋಳಿ ಮತ್ತು ಇತರ ದೇಶೀಯ ಪಕ್ಷಿಗಳನ್ನು ಕೊಲ್ಲಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳು ಮತ್ತು ಪಶುಸಂಗೋಪನಾ ಇಲಾಖೆಗೆ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ಇನ್ನು ಮಂಗಳವಾರದಿಂದಲೇ ಜಾರಿಗೆ ಬರುವಂತೆ ಹಕ್ಕಿಜ್ವರ ಪೀಡಿತ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ, ಬಾತುಕೋಳಿ, ಇತರ ಸಾಕು ಪಕ್ಷಿಗಳು, ಮೊಟ್ಟೆ,ಮಾಂಸ, ಗೊಬ್ಬರ ಸೇರಿದಂತೆ ಪಕ್ಷಿಗಳ ಉತ್ಪನ್ನಗಳ ಮಾರಾಟ ಮತ್ತು ಸಾಗಾಟವನ್ನೂ ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ.