ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ
ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಸಿದ್ಧಪಡಿಸಲು ಸಮಿತಿಗೆ ಅವಕಾಶ ಕಲ್ಪಿಸುವ ವಿವಾದಾತ್ಮಕ ಖಾಸಗಿ ಸದಸ್ಯರ ಮಸೂದೆಯನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
ವಿರೋಧ ಪಕ್ಷಗಳ ವಿರೋಧದ ನಡುವೆಯೇ ‘ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ, 2020’ ಅನ್ನು ಮೇಲ್ಮನೆಯಲ್ಲಿ ಮಂಡಿಸಲಾಯಿತು. ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ಮತ್ತು ಭಾರತದಾದ್ಯಂತ ಅದರ ಅನುಷ್ಠಾನಕ್ಕಾಗಿ ರಾಷ್ಟ್ರೀಯ ತಪಾಸಣೆ ಮತ್ತು ತನಿಖಾ ಸಮಿತಿ ರಚನೆಗೆ ಅವಕಾಶ ಕಲ್ಪಿಸುವ ವಿಧೇಯಕವನ್ನು ಮಂಡಿಸಿದರು.
ಈ ಮಸೂದೆ ಮಂಡನೆ ವಿರೋಧಿಸಿ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ತೃಣಮೂಲ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು. ಇದು ದೇಶದಲ್ಲಿ ಪ್ರಚಲಿತದಲ್ಲಿರುವ ಸಾಮಾಜಿಕ ರಚನೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು “ನಾಶಗೊಳಿಸುತ್ತದೆ” ಎಂದು ಹೇಳಿದರು. ಈ ಹಿಂದೆ, ಮಸೂದೆಯನ್ನು ಪರಿಚಯಿಸಲು ಪಟ್ಟಿ ಮಾಡಲಾಗಿದ್ದರೂ, ಅದನ್ನು ಮೇಲ್ಮನೆಯಲ್ಲಿ ಮಂಡಿಸಿರಲಿಲ್ಲ.
ಸೂಕ್ಷ್ಮ ವಿಷಯವಾಗಿರುವ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿ ಕುರಿತು ಈಗಾಗಲೇ ಹಲವು ರಾಜ್ಯಗಳಲ್ಲಿ ಚರ್ಚೆಗಳು ನಡೆದಿವೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕುರಿತು ಚರ್ಚೆಗಳಾಗಿವೆ. ಮಧ್ಯಪ್ರದೇಶ ಏಕರೂಪ ನಾಗರಿಕ ಸಂಹಿತೆ ಮಸೂದೆ ರಚನೆಗಾಗಿ ಕಳೆದ ಡಿ.2ರಂದು ಸಮಿತಿಯೊಂದನ್ನು ರಚಿಸಿದೆ.