ಹಿಮಾಚಲ ಪ್ರದೇಶ: ಶಾಸಕರ ಖರೀದಿ ಭೀತಿ- ರೆಸಾರ್ಟ್‌ನತ್ತ ಕಾಂಗ್ರೆಸ್ ಶಾಸಕರು!
ರಾಯಪುರ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದೆ. 68 ಕ್ಷೇತ್ರಗಳ ಪೈಕಿ 39ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಪಡೆದಿದ್ದಾರೆ. ಬಿಜೆಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಮಧ್ಯೆ, ಕಾಂಗ್ರೆಸ್‌ಗೆ ಶಾಸಕರ ಖರೀದಿ ಭೀತಿ ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಹಿಮಾಚಲಪ್ರದೇಶದ ಚುನಾವಣಾ ವೀಕ್ಷಕರಾದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ಜೊತೆ ಭೂಪಿಂದರ್ ಸಿಂಗ್ ಹೂಡಾ, ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಸೇರಿದಂತೆ ಹಿರಿಯ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಚಂಡೀಗಢಕ್ಕೆ ಕಳುಹಿಸಿದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಬಿಜೆಪಿ ಯತ್ನವನ್ನು ತಡೆಯುವ ಕಾರ್ಯಾಚರಣೆ ನಡೆಯುತ್ತಿದೆ. ನಾನು ಮತ್ತು ರಾಜೀವ್ ಶುಕ್ಲಾ ಚಂಡೀಗಢಕ್ಕೆ ತೆರಳುತ್ತಿದ್ದೇವೆ. ಭೂಪಿಂದರ್ ಸಿಂಗ್ ಹೂಡಾ ಈಗಾಗಲೇ ಅಲ್ಲಿಗೆ ತೆರಳಿದ್ದಾರೆ ಎಂದು ಬಘೇಲ್ ತಿಳಿಸಿದ್ದಾರೆ.
‘ನಾವು ನಮ್ಮ ನಾಯಕರನ್ನು ಚಂಡೀಗಢಕ್ಕೆ ಕರೆದೊಯ್ಯುತ್ತಿದ್ದೇವೆ. ಶಾಸಕರನ್ನು ಸೆಳೆಯುವ ಬಿಜೆಪಿಯ ಯತ್ನಕ್ಕೆ ಪಕ್ಷದ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚುತ್ತಿದ್ದೇವೆ. ಈ ಹಿಂದೆ ಹಲವು ಬಾರಿ ಬಿಜೆಪಿ ಆ ಕೆಲಸ ಮಾಡಿದೆ’ಎಂದು ಹಿಮಾಚಲಪ್ರದೇಶದ ಪಕ್ಷದ ಉಸ್ತುವಾರಿ ತಜಿಂದರ್ ಸಿಂಗ್ ಬಿಟ್ಟು ಹೇಳಿದ್ಧಾರೆ.