ದೇವರು ಮೆಚ್ಚುವಂಥ ಕೆಲಸ ಮಾಡಿದ್ದೇವೆ, ಇನ್ನು ಯಾವುದೇ ಹೊಸ ಘೋಷಣೆ ಮಾಡುವುದಿಲ್ಲ: ಸಿಎಂ

ಬೆಂಗಳೂರು: ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಸಮಾಜದ ವಿವಿಧ ವರ್ಗಗಳ ಜನರಿಗೆ ರಾಜ್ಯ ಸರ್ಕಾರದಿಂದ ಸಾಧ್ಯವಾದಷ್ಟು ಪರಿಹಾರ ನೀಡಲಾಗಿದೆ. ಘೋಷಣೆ ಆಗಿರುವ ಕಾರ್ಯಕ್ರಮಗಳಿಗೆ ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಇನ್ಯಾವುದು ಘೋಷಣೆ ಮಾಡುವುದಿಲ್ಲ. ಶಕ್ತಿಮೀರಿ ದೇವರು ಮೆಚ್ಚುವಂತ ಕೆಲಸ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೆಹರೂ ಪ್ರತಿಮೆಗೆ ಯಡಿಯೂರಪ್ಪ ಮಾಲಾರ್ಪಣೆ ಮಾಡಿ, ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದರು. ಸರ್ಕಾರ ಜನಮೆಚ್ಚುವ, ದೇವರು ಮೆಚ್ಚುವ ಕೆಲಸ ಮಾಡಿದೆ, ಅದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕೋವಿಡ್ ಹಿನ್ನಲೆಯಲ್ಲಿ ಘೋಷಣೆ ಮಾಡಿದ ಪರಿಹಾರ ಜನರಿಗೆ ತಲುಪುತ್ತಿದ್ದೆ. ಇದರಲ್ಲಿ ಯಾವುದೇ ತೊಂದರೆ ಆಗಿಲ್ಲ. ದೇವರು ಮೆಚ್ಚುವ ಕೆಲಸ ಮಾಡಿದ್ದೇವೆ. ಹಂತ ಹಂತವಾಗಿ ಪರಿಹಾರ ಬಿಡುಗಡೆ ಮಾಡುತ್ತಿದ್ದೇವೆ. ಹಣಕಾಸು ಬಿಡುಗಡೆ ಮಾಡಿ ಕೆಲಸ ಪ್ರಾರಂಭ ಮಾಡಿದ್ದೇವೆ ಎಂದರು.

ಬಹುತೇಕ ಚಟುವಟಿಕೆಗಳು ಜೂನ್​​ನಿಂದ ಆರಂಭವಾಗುವ ನಿರೀಕ್ಷೆಯಿದೆ. ಎಲ್ಲದಕ್ಕೂ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ರಾಜ್ಯ ಸರ್ಕಾರ ದೇವಸ್ಥಾನ, ಚರ್ಚ್​, ಮಸೀದಿ ಎಲ್ಲವೂ ತೆರೆಯಲು ಅನುಮತಿ ನೀಡಿದೆ. ಇದಕ್ಕೆ ಯಾವುದೇ ಆತಂಕ, ಅಭ್ಯಂತರ, ಅಡ್ಡಿಯಿಲ್ಲ.  ಮಾಲ್​, ರೆಸ್ಟೋರೆಂಟ್, ಹೊಟೇಲ್ ತೆರೆಯಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದರು.

ನಾವು ಕೋವಿಡ್-19 ಜತೆ ಬದುಕಬೇಕಾಗಿದೆ. ಸಾಕಷ್ಟು ಸಮಸ್ಯೆಗಳಿವೆ. ಹೊರಗಿನ ರಾಜ್ಯಗಳಿಂದ ಜನ ಬರುತ್ತಿದ್ದಾರೆ. ಎಲ್ಲರಿಗೂ ಉಳಿಯಲು ವ್ಯವಸ್ಥೆ ಮಾಡಬೇಕಿದೆ. ಅವರ ವಸತಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆಯೂ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಗಮನ ಸೆಳೆಯಲಾಗಿದೆ ಎಂದರು.

ಧರ್ಮಸ್ಥಳದಲ್ಲಿ ಕೆಲವೊಂದು ತೀರ್ಮಾನ ಮಾಡಿಕೊಂಡಿದ್ದಾರೆ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ರಾತ್ರಿ ಯಾರು ರೂಮ್‌ಗಳಲ್ಲಿ ಉಳಿದುಕೊಳ್ಳುವಂತಿಲ್ಲ ಎಂದು ವೀರೇಂದ್ರ ಹೆಗ್ಗಡೆ ತೀರ್ಮಾನ ಮಾಡಿದ್ದಾರೆ. ಬೇರೆ ಸಮುದಾಯಗಳಿಗೆ ನೆರವು ನೀಡುವ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದರು.

ವಿಪ್ರೊ ಸಹಾಯದಿಂದ ಸ್ಥಾಪನೆಯಾಗಿರುವ ಸ್ಮಾರ್ಟ್ ಕಿಯೋಸ್ಕ್​​ ಕೇಂದ್ರಗಳಿಗೆ ನಂತರ ಭೇಟಿ ನೀಡಿದರು. 15 ಕಡೆ ಸ್ಥಾಪನೆ ಸ್ಮಾರ್ಟ್ ಕಿಯೊಸ್ಕ್ ಗಳನ್ನು ಸ್ಥಾಪನೆ ಮಾಡಲಿದ್ದೇವೆ. ಇದರಿಂದ ಹೆಚ್ಚು ಕೊರೋನಾ ಪರೀಕ್ಷೆ ಮಾಡಲು ಅನುಕೂಲವಾಗಲಿದೆ. ಸರ್ಕಾರದ ಜತೆ ಕೈಜೋಡಿಸಿ ಸ್ಮಾರ್ಟ್ ಕಿಯೋಸ್ಕ್ ಇತರ ಖಾಸಗಿ ಕಂಪನಿಗಳಿಗೆ ಮಾದರಿಯಾಗಿದೆ. ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇವೆ. ಬೆಂಗಳೂರು ಕೊರೋನಾ ತಡೆಗಟ್ಡುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ ಎಂದು ತಿಳಿದರು.

Leave a Reply

Your email address will not be published. Required fields are marked *

error: Content is protected !!