ವೈಯಕ್ತಿಕ ಉಳಿತಾಯ, ಗಿಫ್ಟ್ ಹರಾಜು ಹಣದಿಂದ 103 ಕೋಟಿ ದಾನ ಮಾಡಿದ ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಉಳಿತಾಯದ ಹಣ ಹಾಗೂ ತಮಗೆ ನೀಡಿದ ಉಡುಗೊರೆಗಳಿಂದ ಬಂದ ಹಣವನ್ನು ಬಾಲಕಿಯರ ಶಿಕ್ಷಣ ಹಾಗೂ ಗಂಗಾ ನದಿ ಸ್ವಚ್ಛ ಯೋಜನೆ ಸೇರಿದಂತೆ ವಿವಿಧ ಸೇವೆ ಹಾಗೂ ಯೋಜನೆಗಳಿಗೆ ದೇಣಿಗೆ ನೀಡುತ್ತಾ ಬಂದಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದಲೂ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದುವರೆಗೆ ಅವರು ಒಟ್ಟು 103 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ಪಿಎಂ ಕೇರ್ಸ್ ಫಂಡ್ ಸ್ಥಾಪನೆಯಾದಾಗ ಅದಕ್ಕೆ ಪ್ರಧಾನಿ ಮೋದಿ ಅವರೇ ಮೊದಲು ದೇಣಿಗೆ ನೀಡಿದ್ದರು. ಮೋದಿ ಪಿಎಂ ಕೇರ್ಸ್ ಗೆ 2.25 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದರು.
ಪ್ರಧಾನಿ ಮೋದಿ ಅವರು 2019ರಲ್ಲಿ ಕುಂಭಮೇಳದ ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಕಾರ್ಪಸ್ ನಿಧಿಗೆ ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂ. ನೀಡಿದ್ದರು.
2019 ರಲ್ಲಿ ದಕ್ಷಿಣ ಕೊರಿಯಾದಲ್ಲಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆದ ನಂತರ, ಪ್ರಧಾನಿ ಮೋದಿ, ಆ ಪ್ರಶಸ್ತಿ ಹಣ 1.30 ಕೋಟಿ ರೂ. ನಮಾಮಿ ಗಂಗೆ ಯೋಜನೆಗೆ ನೀಡಿದ್ದರು.
ಪ್ರಧಾನಿಯಾಗಿ ಮೊದಲ ಅವಧಿ ಮುಗಿದ ಸಂದರ್ಭದಲ್ಲೂ ಅವರು ತಮಗೆ ಸಿಕ್ಕ ಉಡುಗೊರೆಗಳನ್ನ ಮಾರಿ ಅದರಿಂದ ಬಂದ 3.40 ಕೋಟಿ ರೂ ಅನ್ನು ಇದೇ ನಮಾಮಿ ಗಂಗೆ ಯೋಜನೆಗೆ ಕೊಟ್ಟಿದ್ದರು.