ಕಾಪು ಪೊಲೀಸರ ಅಣತಿಯಂತೆ ಮತದಾರರ ಮಾಹಿತಿ ಸಂಗ್ರಹ! ಸಾರ್ವಜನಿಕರ ಆಕ್ರೋಶ

ಕಾಪು: ಆಶಾ ಕಾರ್ಯಕರ್ತೆಯರು ಕಾಪು‌ ಪೊಲೀಸರ ಸೂಚನೆಯಂತೆ ಮನೆಮನೆಗೆ ಹೋಗಿ ಮತದಾರರ ಮಾಹಿತಿ ಸಂಗ್ರಹಿಸುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದು ತೀವ್ರ ವಿರೋಧ ವ್ಯಕ್ತವಾಗಿದೆ.

ಇಲ್ಲಿನ ಉಚ್ಚಿಲದ ವಸತಿ ಸಮುಚ್ಚಯಕ್ಕೆ ತೆರಳಿದ ಮಹಿಳೆಯೊಬ್ಬರು ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಮುಂದಾದಾಗ ಸಂಶಯಗೊಂಡ ಮಹಿಳೆಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಮಪರ್ಕವಾಗಿ ಉತ್ತರಿಸದೆ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಸಂಗ್ರಹಿಸಲು ಬಂದಿರುವುದಾಗಿ ಕಾರ್ಯಕರ್ತೆ ಉತ್ತರಿಸಿದ್ದಾರೆ.

ಮಾಹಿತಿ ನೀಡದಿದ್ದಲ್ಲಿ ಪೊಲೀಸರ ಮೂಲಕ ಕ್ರಮಕೈಗೊಳ್ಳಲಾಗುವುದು ಎಂದು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಅನುಮಾನಗೊಂಡ ಮಹಿಳೆ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಯಾವುದೇ ಇಲಾಖೆಯ ಹೆಸರು ನಮೂದಿಸದ ಫಾರಂನಲ್ಲಿ ಮನೆಯ ಸದಸ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ವಾಹನಗಳ ಸಂಖ್ಯೆ, ಗ್ಯಾಸ್ ಕಂಪೆನಿ ವಿವರ, ನಂಬರ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾಸ್‌ಪೋರ್ಟ್ ಸಂಖ್ಯೆ, ಮಕ್ಕಳ ವಿವರ, ಸಸ್ಯಾಹಾರಿ ಅಥವಾ ಮಾಂಸಾಹಾರಿ, ಜಾತಿ, ಮನೆಯವರ ಆರೋಗ್ಯದ ಬಗ್ಗೆ ಮಾಹಿತಿ, ಕೋವಿಡ್ ಲಸಿಕೆ ಪಡೆದ ಮಾಹಿತಿ, ಇತರ ಚುಚ್ಚುಮದ್ದು ತೆಗೆದುಕೊಂಡ ವಿವರ, ಬ್ಯಾಂಕ್ ಖಾತೆ ಸಂಖ್ಯೆ, ಅಂಚೆ ಕಚೇರಿ ಖಾತೆ, ಉಳಿತಾಯ ಖಾತೆಗಳ ವಿವರಗಳು, ಕುಟುಂಬ ಸದಸ್ಯರ ವಿದ್ಯಾಭ್ಯಾಸ ಶಾಲೆಯ ಹೆಸರು, ವಿಳಾಸ, ಜನ್ಮ ಸ್ಥಳ, ದಿನಾಂಕದ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಸರ್ವೇ ಬಗ್ಗೆ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೂ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿಯ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದಾಗ ಪೊಲೀಸ್ ಇಲಾಖೆಯಿಂದ ಇಂತಹ ಯಾವುದೇ ಸರ್ವೆ ನಡೆಯುತ್ತಿಲ್ಲ, ಹಾಗೂ ಇಲಾಖೆ ಯಾವತ್ತೂ ಯಾವುದೇ ಸರ್ವೆ ಕಾರ್ಯಕ್ಕೆ ಆಶಾ‌ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!