ಬೈಂದೂರು: ರೈಲು‌ ಪ್ರಯಾಣಿಕನ 5.80 ಲಕ್ಷ ರೂ.ಮೌಲ್ಯದ ನಗ-ನಗದು ಕಳವು

ಬೈಂದೂರು ಡಿ.2(ಉಡುಪಿ ಟೈಮ್ಸ್ ವರದಿ): ಚಲಿಸುತ್ತಿದ್ದ ರೈಲಿನಲ್ಲಿ ಬೈಂದೂರು ರೈಲ್ವೆ  ಸ್ಟೇಷನ್ ಹತ್ತಿರ ಪ್ರಯಾಣಿಕೊಬ್ಬರ 5.80 ಲಕ್ಷ ರೂ. ಮೌಲ್ಯದ ನಗ-ನಗದು ಇದ್ದ ವ್ಯಾನಿಟಿ ಬ್ಯಾಗ್ ನ್ನು ಕಳವು ಮಾಡಿರುವ ಘಟನೆ ನಡೆದಿದೆ.

ತಮಿಳುನಾಡು ಮೂಲದ ಅಮುಲ್ ಕುಟ್ಟಿ ಎಂಬವರು ಸೆ.29 ರಂದು ಮುಂಬೈನಿಂದ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ರೈಲು ಪ್ರಯಾಣ ಮಾಡಿದ್ದರು.ರೈಲಿನ ಸೀಟ್ ನಲ್ಲಿ  ತಮ್ಮ ವ್ಯಾನಿಟಿ ಬ್ಯಾಗ್ ಇಟ್ಟುಕೊಂಡು ಮಲಗಿದ್ದು ಬಳಿಕ ಬೆಳಿಗ್ಗೆ 5:40 ರ ಸಮಯದಲ್ಲಿ ಎದ್ದು ನೋಡಿದಾಗ ಅವರ ಬಳಿ ಇದ್ದ ವ್ಯಾನಿಟಿ ಬ್ಯಾಗ್ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಟಿಟಿಯವರಿಗೆ ಮಾಹಿತಿ ತಿಳಿಸಿದ್ದರು. ಹಾಗೂ ಮಂಗಳೂರು ಜಂಕ್ಷನ್ ನಲ್ಲಿ ರೈಲು ನಿಲ್ದಾಣದಲ್ಲಿ ಇಳಿಯುವಾಗ ಸಹ ಪ್ರಯಾಣಿಕರೊಬ್ಬರಿಗೆ ಫೋನ್ ನಂಬ್ರ ನೀಡಿ ವ್ಯಾನಿಟಿ ಬ್ಯಾಗ್ ಬಗ್ಗೆ ಮಾಹಿತಿ ತಿಳಿಸುವಂತೆ ತಿಳಿಸಿದ್ದರು.

ಆ ಪ್ರಯಾಣಿಕ  ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ರೈಲು ಗಾಡಿ ಇರುವಾಗಲೇ ಅಮುಲ್ ಕುಟ್ಟಿರವರಿಗೆ ಕರೆ ಮಾಡಿ ವ್ಯಾನಿಟಿ ಬ್ಯಾಗ್ ರೈಲ್ವೆ ಗಾಡಿಯ ಶೌಚಾಲಯದ ಬಳಿ ಇರುವ ಡಸ್ಟ್ ಬಿನ್ ನಲ್ಲಿ ಸಿಕ್ಕಿರುವುದಾಗಿ ತಿಳಿಸಿದ್ದರು.ಆದರೆ ವ್ಯಾನಿಟಿ ಬ್ಯಾಗ್ ನಲ್ಲಿ ಎರಡು ಪೋನ್ ಮತ್ತು ಆಧಾರ್ ಕಾರ್ಡ ಇದ್ದು ಬ್ಯಾಗ್ ನಲ್ಲಿದ್ದ 50,000ರೂ. ನಗದು ಹಾಗೂ 5,30,000 ರೂ.ಮೌಲ್ಯದ ಚಿನ್ನಾಭರಣ ಕಳವಾಗಿದೆ.

ಅದರಂತೆ ಸೆ. 20 ರಂದು ಬೆಳಿಗ್ಗಿನ ಜಾವ 5:00  ಗಂಟೆಯಿಂದ 05:40 ಗಂಟೆಯ ನಡುವೆ ಚಲಿಸುತ್ತಿದ್ದ ರೈಲಿನಲ್ಲಿ ಬೈಂದೂರು ರೈಲ್ವೆ ಸ್ಟೇಷನ್ ಹತ್ತಿರ ಕಳ್ಳರು ಅಮುಲ್ ಕುಟ್ಟಿ ಅವರ ವ್ಯಾನಿಟಿ ಬ್ಯಾಗ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಬೈಂದೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.  

Leave a Reply

Your email address will not be published. Required fields are marked *

error: Content is protected !!