ಉಡುಪಿ: ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಪೆಟ್ರೋಲ್ ಬಂಕ್ ಮ್ಯಾನೇಜರ್’ನ ಸಾವಿರಾರು ರೂ. ಎಗರಿಸಿದ ಖದೀಮರು

ಉಡುಪಿ ಡಿ.1(ಉಡುಪಿ ಟೈಮ್ಸ್ ವರದಿ): ಆನ್‍ಲೈನ್ ವ್ಯವಹಾರದ ಖಾತೆಯನ್ನು ಹ್ಯಾಕ್ ಮಾಡಿ 38 ಸಾವಿರ ರೂ. ಮೋಸದಿಂದ ಪಡೆದು ನಷ್ಟ ಉಂಟು ಮಾಡಿರುವುದಾಗಿ ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಕುಂದಾಪುರ ಇಡೂರು ಕುಂಜ್ಞಾಡಿ ಗ್ರಾಮದ ಮಲ್ಲಿಕಾರ್ಜುನ ಶೆಟ್ಟಿ ಎಂಬವರು ಪೊಲಿಸರಿಗೆ ದೂರು ನೀಡಿದ್ದು, ಇವರು  ಚಂದ್ರಶೇಖರ ಶೆಟ್ಟಿ ಎಂಬವರ ಮಾಲಕತ್ವದ ಇಡೂರು ಕುಂಜ್ಞಾಡಿಯಲ್ಲಿರುವ ಮಾತೃಶ್ರೀ ಎಂಟರ್ ಪ್ರೈಸಸ್ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. 2 ವರ್ಷಗಳ ಹಿಂದೆ ಪೆಟ್ರೋಲ್ ಬಂಕ್ ನ ವ್ಯವಹಾರಗಳಿಗೆ ಸಂಬಂಧಿಸಿ ಫಿನೋ ಬ್ಯಾಂಕ್ ವತಿಯಿಂದ ಮಿನಿ ಎಟಿಎಂನ್ನು ಪಡೆದುಕೊಂಡಿದ್ದರು. ಇದರಲ್ಲಿ ವ್ಯವಹಾರಕ್ಕೆ ಬಳಸಿದ ಹಣವನ್ನು ಫಿನೋ ಬ್ಯಾಂಕ್ ನ ಚಂದ್ರಶೇಖರ್ ಶೆಟ್ಟಿ ರವರ ಖಾತೆಗೆ ಜಮೆ ಮಾಡುತ್ತಿದ್ದರು. ಇದನ್ನು ಮಲ್ಲಿಕಾರ್ಜುನ ಶೆಟ್ಟಿ ಅವರು ಪ್ರತಿ ದಿನ ಸಂಜೆ ಮೊಬೈಲ್ ಗೆ ಬಂದ ಒಟಿಪಿ ಯನ್ನು ಪಡೆದು ಚಂದ್ರಶೇಖರ್ ಶೆಟ್ಟಿ ಯವರ ಖಾತೆಗೆ ವರ್ಗಾಯಿಸುತ್ತಿದ್ದರು.

ಆದರೆ ನ.23ರಂದು ಸಂಜೆ ವೇಳೆ ಮಾಲಕರ ಖಾತೆಗೆ ಹಣ ವರ್ಗಾವಣೆ ಮಾಡಲು ಮಿನಿ ಎಟಿಎಂನ್ನುಪರಿಶೀಲಿಸಿದಾಗ ಫಿನೋ ಅಕೌಂಟ್ ನಲ್ಲಿ ರೂಪಾಯಿ 12.24 ಮಾತ್ರ ಇರುವುದು ಕಂಡು ಬಂದಿದೆ. ತಕ್ಷಣ ಫಿನೋ ಬ್ಯಾಂಕ್ ನ ಸ್ಟೇಟ್ ಮೆಂಟ್ ಪಡೆದು ಪರಿಶೀಲಿಸಿದಾಗ ಅದೇ ದಿನ 38,550 ರೂ.ಹಣವು ಅಪರಿಚಿತ ಮೊಬೈಲ್ ನಂಬ್ರಕ್ಕೆ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.

ಅದರಂತೆ ಅಪರಿಚಿತ ವ್ಯಕ್ತಿಗಳು ಫಿನೋ ಬ್ಯಾಂಕ್ ನ ಎಟಿಎಂ ಮೆಷಿನನ್ನು ಹ್ಯಾಕ್ ಮಾಡಿ, ಸಂಸ್ಥೆಯ 38,550 ರೂ. ನಗದನ್ನು ಮೋಸದಿಂದ ಪಡೆದು ಸಂಸ್ಥೆಗೆ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!