ಉಡುಪಿ ಜಿಲ್ಲೆಯಲ್ಲಿ ತಂಗಿರುವ ವಿದೇಶಿಯರ ಮಾಹಿತಿಯನ್ನು 24 ಗಂಟೆಯೊಳಗೆ ನೀಡಿ- ಜಿಲ್ಲಾ ಪೊಲೀಸ್ ಸೂಚನೆ

ಉಡುಪಿ ನ.30 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ವಿದೇಶಿಯರು ತಂಗಿರುವ ಬಗ್ಗೆ ಮಾಹಿತಿಯ ಫಾರ್ಮ್ “ಸಿ” ಯನ್ನು ಸಂಬಂಧಪಟ್ಟ ಮಾಲೀಕರು ನೋಂದಣಿ ಅಧಿಕಾರಿಗಳಿಗೆ(ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ಅಧೀಕ್ಷಕರು) 24 ಗಂಟೆಯೊಳಗೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆಯನ್ನು ಹೊರಡಿಸಿದ್ದು, ವಿದೇಶೀಯರ ಕಾಯ್ದೆ 1946ರ ಕಲಂ. 7 ರಂತೆ ಯಾವುದೇ ವಿದೇಶಿಯರು ತಂಗುವ ಸ್ಥಳಗಳಾದ ಹೊಟೇಲ್, ಗೆಸ್ಟ್ ಹೌಸ್, ಧರ್ಮಶಾಲಾ, ಪ್ರತ್ಯೇಕ ಮನೆ, ಯುನಿವರ್ಸಿಟಿ, ವಿದ್ಯಾ ಸಂಸ್ಥೆ ಇತರೆ ಸ್ಥಳಗಳಲ್ಲಿ ವಿದೇಶಿಯರು ತಂಗಿದ ಬಗ್ಗೆ ಮಾಹಿತಿಯ ಫಾರ್ಮ್ “ಸಿ” ಯನ್ನು ಸಂಬಂಧಪಟ್ಟ ಮಾಲೀಕರು ನೋಂದಣಿ ಅಧಿಕಾರಿಗಳಿಗೆ(ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ಅಧೀಕ್ಷಕರು) 24 ಗಂಟೆಯೊಳಗೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಲು https://indianfrro.gov.in/frro/FormC ಲಿಂಕ್ ಮೂಲಕ ನೊಂದಣಿ ಮಾಡ ಬಹುದಾಗಿದೆ. ಫಾರ್ಮ್ “ಸಿ” ಆನ್ಲೈನ್ ನಲ್ಲಿ ಭರ್ತಿಗೊಳಿಸುವುದು ಖಡ್ಡಾಯವಾಗಿದ್ದು, ವಿದೇಶಿಯರಿಗೆ ಫಾರ್ಮ್ “ಸಿ” ಭರ್ತಿ ಗೊಳಿಸುವ ಅವಕಾಶವಿರುವುದಿಲ್ಲ, ಇದು ಆಯಾ ಸ್ಥಳಗಳ ಮಾಲಿಕರ ಜವಾಬ್ದಾರಿಯಾಗಿರುತ್ತದೆ. ಹಾಗೂ ಪ್ರತ್ಯೇಕ ಮನೆಯ ಮಾಲೀಕರಿಗೆ ಓ.ಟಿ.ಪಿ ಮೂಲಕ ಸ್ವಯಂ ನೋಂದಣಿಗೆ ಅವಕಾಶವಿರುತ್ತದೆ. ಇದರೊಂದಿಗೆ ಫಾರ್ಮ್ “ಸಿ” ಆನ್ಲೈನ್ ನಲ್ಲಿ ಭರ್ತಿಗೊಳಿಸುವ ಸಂಭಂಧ ತಾಂತ್ರಿಕ ಕಾರಣಗಳಿಗೆ ಪೈರ್ಫಾಕ್ಸ್ ಉಪಯೋಗಿಸಬೇಕು ಎಂದು ತಿಳಿಸಲಾಗಿದೆ.

ಹಾಗೂ ಈ ನಿಭಂದನೆಯ ಉಲ್ಲಂಘನೆಯಾದಲ್ಲಿ ಸಂಭಂದಪಟ್ಟವರ ವಿರುದ್ಧ ಕಲಂ 14 ವಿದೇಶಿಯರ ಕಾಯ್ದೆ 1946 ರಂತೆ ಕ್ರಮ ಜರುಗಿಸಬಹುದಾಗಿದ್ದು, ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಕಲಸ ಕೊಡಿಸುವುದಾಗಿ ನಂಬಿಸಿ, ಮುಂಗಡವಾಗಿ ಹಣ ಪಡೆದು ವಿದೇಶಕ್ಕೆ ತೆರಳಿದ ನಂತರ ಸರಿಯಾದ ಕೆಲಸವಿಲ್ಲದೆ, ಹಣ ಹಾಗೂ ಕೆಲಸವನ್ನು ಕಳೆದುಕೊಂಡು ವಂಚನೆ ಗೊಳಗಾದ ಉದಾಹರಣೆಗಳು ಕಂಡುಬಂದಿರುತ್ತದೆ. ಆದ್ದರಿಂದ ನಾಗರೀಕರು ಜಾಗರುಕತೆಯಿಂದ ಅನಧಿಕೃತ ಎಜೆಂಟರನ್ನು ಸಂಪರ್ಕಿಸದೆ ಮಿನಿಸ್ಟ್ರೀ ಆಫ್ ಎಕ್ಸ್ಟರ್ನಲ್ ಎಫೇರ್ಸ್ ನೊಂದಿಗೆ ನೋಂದಾಯಿತ ಎಜೆಂಟರು ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ. ಹಾಗೂ ಉಡುಪಿ ಜಿಲ್ಲೆಯಲ್ಲಿ ಅಧಿಕೃತವಾಗಿ ನೊಂದಾಯಿತರ ಮಾಹಿತಿಯನ್ನು https://www.emigrants.gov.in ನಿಂದ ಪಡೆದುಕೊಳ್ಳ ಬಹುದಾಗಿದೆ.

ಇನ್ನು ಹೊಸ ಅಥವಾ ನವೀಕೃತ ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವ ಬಗ್ಗೆ ಸ್ಥಳೀಯ ಅಧೀಕೃತ ಪಾಸ್ ಪೋರ್ಟ್  ಸೇವಾ ಕೇಂದ್ರಗಳನ್ನು(ಬೃಹ್ಮಾವರ/ಮಂಗಳೂರು) ಸಂಪರ್ಕಿಸಿ ಸರಿಯಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಪ್ರಕಟಣೆಯಂತೆ ಯಾವುದೇ ಅಧಿಕೃತ ನೋಂದಾಯಿತ ಎಜೆಂಟ್ ಗಳು ಇರುವುದಿಲ್ಲ. ಹೆಚ್ಚಿನ ಮಾಹಿತಿಯನ್ನು https://www.passportindia.gov.in  ಮೂಲಕ ಪಡೆಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ನಕಲಿ ಪಾಸ್  ಪೋರ್ಟ್ ಪಡೆದ ಪ್ರಕರಣಗಳು ಬೆಳಕಿಗೆ ಬಂದಿದ್ದು. ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಪಡೆಯಲು ಸಹಕರಿಸುವ ಎಜೆಂಟ್ ಹಾಗೂ ಅರ್ಜಿದಾರರು ಪತ್ತೆಯಾದಲ್ಲಿ ಅವರ ವಿರುದ್ದ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!