ಉಡುಪಿ: ಸೆ.8 ರಂದು ಪಂಜರ ಮೀನು ಕೃಷಿ ಕಾರ್ಯಗಾರ- ಯಶ್‌ಪಾಲ್
September 3, 2020
ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ, ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆ ವತಿಯಿಂದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ವಿಶೇಷ ಮುತುವರ್ಜಿಯಿಂದ ಪಂಜರ ಮೀನು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಗಾರವನ್ನು ಸೆಪ್ಟೆಂಬರ್ 8 ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ಈ ಕಾರ್ಯಗಾರವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಲಿದ್ದು, ಶಾಸಕರಾದ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಪಂಜರ ಮೀನು ಕೃಷಿಗೆ ವಿಶೇಷ ಒತ್ತು ನೀಡುವ ಮೂಲಕ, ರಾಜ್ಯದಾದ್ಯಂತ 10 ಸಾವಿರ ಮಂದಿಗೆ ಸ್ವ ಉದ್ಯೋಗ ನೀಡುವ ಉದ್ದೇಶಹೊಂದಿದ್ದು, ಪೂರಕವಾಗಿ ಉಡುಪಿಯಲ್ಲಿ ಈ ಕಾರ್ಯಗಾರವನ್ನು ಆಯೋಜಿಸಲಾಗಿಸಲಾಗಿದೆ.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಪಂಜರ ಮೀನು ಕೃಷಿ ಹಾಗೂ ಈ ಬಗ್ಗೆ ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಲಿದ್ದು, ಕಾರ್ಯಗಾರದಲ್ಲಿ ಭಾಗವಹಿಸಲಿಚ್ಚಿಸುವವರು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ದಿವಾಕರ ಖಾರ್ವಿ (9844339919) ಮತ್ತು ಪ್ರಥಮ ದರ್ಜೆ ಸಹಾಯಕರಾದ ರವಿ ಕುಮಾರ್ (9741448143) ಮಾಹಿತಿಯನ್ನು ಪಡೆಯಬಹುದು.
ಉಡುಪಿ ಜಿಲ್ಲೆಯಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂಜರು ಮೀನು ಕೃಷಿಯ ಮೂಲಕ ಸ್ವ ಉದ್ಯೋಗಿಗಳಾಗುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.