ಧಾರ್ಮಿಕ ಸ್ವಾತಂತ್ರ್ಯವು ಯಾರೊಬ್ಬರನ್ನೂ ನಿರ್ದಿಷ್ಟ ಧರ್ಮಕ್ಕೆ ಮತಾಂತರ ಮಾಡುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ

ದೆಹಲಿ ನ.29: ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯವು ಯಾರೊಬ್ಬರನ್ನೂ ನಿರ್ದಿಷ್ಟ ಧರ್ಮಕ್ಕೆ ಮತಾಂತರ ಮಾಡುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್​ಗೆ ಹೇಳಿದೆ.

ದೇಶಾದ್ಯಂತ ಮೋಸ ಮತ್ತು ಪ್ರಲೋಭನೆ ಒಡ್ಡಿ ಮತಾಂತರ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಈ ಪ್ರಕ್ರಿಯೆಗೆ ಕಡಿವಾಣ ಹಾಕದಿದ್ದರೆ ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಾರೆ ಎಂದು ದೂರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿನ್ನೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. 

ಈ ಬಗ್ಗೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಈ ಸಮಸ್ಯೆಯ ಗಂಭೀರತೆಯ ಅರಿವು ನಮಗಿದೆ. ಮತಾಂತರದ ಅನಾಹುತಗಳನ್ನು ತಡೆಯಲು ಗಂಭೀರ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿತು.

ಹಾಗೂ ಧಾರ್ಮಿಕ ಸ್ವಾತಂತ್ರ್ಯವು ಯಾವುದೇ ವ್ಯಕ್ತಿಯನ್ನು ಮೋಸ, ವಂಚನೆ, ಬೆದರಿಕೆ, ಪ್ರಲೋಭನೆ ಅಥವಾ ಇತರ ಮಾರ್ಗಗಳ ಮೂಲಕ ಮತಾಂತರ ಮಾಡಲು ಅವಕಾಶ ನೀಡುವುದಿಲ್ಲ. ಮತಾಂತರ ತಡೆಯಲು ಕಳೆದ ಹಲವು ವರ್ಷಗಳಿಂದ ಒಡಿಶಾ, ಮಧ್ಯ ಪ್ರದೇಶ, ಗುಜರಾತ್, ಛತ್ತೀಸಗಡ, ಜಾರ್ಖಂಡ್, ಉತ್ತರಾಖಂಡ್, ಉತ್ತರ ಪ್ರದೇಶ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ಕಾನೂನುಗಳನ್ನು ಜಾರಿ ಮಾಡಿವೆ. ಮಹಿಳೆಯರು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಜನರ ಹಿತ ಕಾಪಾಡಲು ಇಂಥ ಕಾಯ್ದೆಗಳು ಅನಿವಾರ್ಯ’. ‘ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ವರ್ತಿಸುವ ಸ್ವಾತಂತ್ರ್ಯವು ಎಲ್ಲ ಭಾರತೀಯರಿಗೆ ಇದೆ. ಈ ಮೌಲಿಕ ಸ್ವಾತಂತ್ರ್ಯ ವನ್ನು ಕಾರ್ಯಾಂಗ ಮತ್ತು ಶಾಸಕಾಂಗವು ರಕ್ಷಿಸ ಬೇಕಿದೆ’ ಎಂದು ಕೇಂದ್ರ ಸರ್ಕಾರವು ಅಫಿಡವಿಟ್​ನಲ್ಲಿ ತಿಳಿಸಿದೆ.

ಪ್ರಕರಣದ ವಿಚಾರಣೆ ಆರಂಭವಾದಾಗ ನ್ಯಾಯಮೂರ್ತಿ ಎಂ.ಆರ್.ಶಾ ನೇತೃತ್ವದ ನ್ಯಾಯಪೀಠವು ‘ಒತ್ತಾಯದ ಮತಾಂತರವು ತೀರಾ ಗಂಭೀರ ವಿಚಾರ. ಈ ಸಂಬಂಧ ಕೇಂದ್ರ ಸರ್ಕಾರವು ರಾಜ್ಯಗಳ ಸಲಹೆ ಪಡೆದು ಅಫಿಡವಿಟ್ ಸಲ್ಲಿಸಿ, ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಒತ್ತಾಯದ ಮತಾಂತರ ಕುರಿತು ಪ್ರಸ್ತಾಪಿಸಿದ್ದ ನ್ಯಾಯಪೀಠವು ‘ಇದು ದೇಶದ ಭದ್ರತೆಗೆ ಆತಂಕ ಉಂಟು ಮಾಡುವ ಗಂಭೀರ ವಿಚಾರ. ದೇಶದ ಪ್ರಜೆಗಳ ಆತ್ಮಸಾಕ್ಷಿಗೂ ಇದು ಸಂಬಂಧಿಸಿದ್ದು’ ಎಂದು ಹೇಳಿತ್ತು. ‘ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ಹೀಗಿರುವಾಗ ಒತ್ತಾಯದ ಮತಾಂತರದ ಔಚಿತ್ಯವೇನು’ ಎಂದು ನ್ಯಾಯಪೀಠವು ಪ್ರಶ್ನಿಸಿತ್ತು.

‘ದೇಶಾದ್ಯಂತ ಒತ್ತಾಯದ ಮತಾಂತರಗಳು ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರವು ವಿಫಲವಾಗಿದೆ’ ಎಂದು ದೂರಿ ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‘ವಂಚನೆಯ ಮತಾಂತರ’ಗಳನ್ನು ತಡೆಯಲು ಸೂಕ್ತ ಕಾನೂನು ರಚಿಸಲು ಭಾರತ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದರು. ‘ಮೋಸ, ವಂಚನೆ, ಪ್ರಲೋಭನೆ ಮತ್ತು ಬೆದರಿಕೆಯಿಂದ ಮಾಡುವ ಮತಾಂತರವು ಸಂವಿಧಾನದ 14, 21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಘೋಷಿಸಬೇಕು’ ಎಂದು ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.

‘ಮತಾಂತರ ಪಿಡುಗು ಇಲ್ಲದ ಒಂದೇ ಒಂದು ಜಿಲ್ಲೆಯು ದೇಶದಲ್ಲಿ ಇಲ್ಲ. ಪ್ರಲೋಭನೆ ಅಥವಾ ಬೆದರಿಕೆಯಿಂದ ಮತಾಂತರ ಮಾಡುವುದು ಸಾಮಾನ್ಯ ಸಂಗತಿಯಾಗಿದೆ’ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ. ‘ಮತಾಂತರವನ್ನು ತಡೆಯದಿದ್ದರೆ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಅಪಾಯವಿದೆ. ಹೀಗಾಗಿ ಕೇಂದ್ರ ಸರ್ಕಾರವು ಶೀಘ್ರ ದೇಶವ್ಯಾಪಿ ಅನ್ವಯವಾಗುವಂತೆ ಕಾನೂನು ಜಾರಿ ಮಾಡಬೇಕು’ ಎಂದು ಕೋರಲಾಗಿದೆ. ಈ ಮೊದಲು ಅವರು ಸಲ್ಲಿಸಿದ್ದ ಇಂಥದ್ದೇ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!