ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ನೋಂದಣಿ ಮಾಡಿಕೊಳ್ಳಿ- ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ. 29: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು,ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರವು ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂ. ಗೆ 2040 ರೂ. ಮತ್ತು ಗ್ರೇಡ್ ಎ ಭತ್ತಕ್ಕೆ 2060 ರೂ. ಕನಿಷ್ಠ ಬೆಂಬಲ ಬೆಲೆ ನಿಗಧಿಪಡಿಸಿರುತ್ತದೆ. ಅದರಂತೆ ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಬೆಳೆಯಲಾಗುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂಓ4 ಭತ್ತದ ತಳಿಗಳನ್ನು ಜಿಲ್ಲೆಯ ರೈತರಿಂದ ಖರೀದಿಸಿ, ಅದನ್ನು ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ, ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಫಲಾನುಭವಿಗಳಿಗೆ ವಿತರಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಸ್ಥಳೀಯ ತಳಿಗಳ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹಧನ ನೀಡಲು ಆದೇಶಿಸಿದ್ದು, ಪ್ರತಿ ಕ್ವಿಂ. ಭತ್ತಕ್ಕೆ ಒಟ್ಟು 2540 ರೂ. ನಿಗಧಿಪಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 16 ಕ್ವಿಂ. ನಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂ. ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದ್ದು, ಈ ಏಜೆನ್ಸಿಯು ರೈತರಿಂದ ಭತ್ತ ಖರೀದಿಸುವ ನೋಂದಣಿ ಪ್ರಕ್ರಿಯೆಯನ್ನು ಈಗಾಗಲೇ ನವೆಂಬರ್ 21 ರಿಂದ ಪ್ರಾರಂಭಿಸಲಾಗಿದೆ. ಒಂದು ತಿಂಗಳು ರೈತರ ನೋಂದಣಿ ಕಾರ್ಯವನ್ನು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕೃಷಿ ಮಾರುಕಟ್ಟೆ ಸಮಿತಿಯ ಎ.ಪಿ.ಎಂ.ಸಿ ಯಾರ್ಡ್ ಗಳಲ್ಲಿ, ಕಾಪು, ಬ್ರಹ್ಮಾವರ, ಕೋಟ, ವಂಡ್ಸೆ ಬೈಂದೂರು ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಹೆಬ್ರಿ ತಾಲೂಕು ಕಚೇರಿಯಲ್ಲಿ ಕೈಗೊಳ್ಳಲಿದ್ದು, ಡಿ. 1 ರಿಂದ 2023 ರ ಫೆ. 28 ರ ವರೆಗೆ ಭತ್ತ ಖರೀದಿ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಹಾಗೂ ಜಿಲ್ಲೆಯ ರೈತರು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ದತ್ತಾಂಶದಲ್ಲಿ ಸೇರ್ಪಡೆಗೊಂಡು ಮತ್ತು ಸೇರ್ಪಡೆಗೊಂಡಿರುವ ಬಗ್ಗೆ ಫ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯೊಂದಿಗೆ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಯ ಮಾಹಿತಿಯೊಂದಿಗೆ ನೋಂದಣಿ ಕೇಂದ್ರದಲ್ಲಿ ನೋಂದಾಯಿ ಕೊಳ್ಳಬಹುದಾಗಿದೆ.  ಕೃಷಿ ಇಲಾಖೆಯ ಗುಣಮಟ್ಟ ಪರಿವೀಕ್ಷಕರು ಸರ್ಕಾರ ನಿಗಧಿಪಡಿಸಿರುವ ಮಾನದಂಡದಂತೆ ಎಫ್‌.ಎ.ಕ್ಯೂ ಗುಣಮಟ್ಟ ಹೊಂದಿರುವ ಭತ್ತವನ್ನು ಪರಿಶೀಲಿಸಿ, ಖರೀದಿಸಲು ಕ್ರಮ ಕೈಗೊಳ್ಳಲಿದ್ದು, ರೈತರು ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!