ಕರ್ನಾಟಕ ಜಾನಪದ ವಿವಿ ನೀಡುವ ಗೌರವ ಡಾಕ್ಟರೇಟ್ ಪದವಿಗೆ ತಲ್ಲೂರು ಶಿವರಾಮ್ ಶೆಟ್ಟಿ ಆಯ್ಕೆ

ಉಡುಪಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ನೀಡುವ 2022 ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ನಾಡಿನ ಪ್ರಸಿದ್ಧ ಸಾಂಸ್ಕೃತಿಕ ಮುಂದಾಳು, ಉದ್ಯಮಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಡಾ.ತಲ್ಲೂರು ಅವರು ಯಕ್ಷಗಾನ ಕಲಾರಂಗ, ರಂಗಭೂಮಿ, ಜಾನಪದ, ಸಾಹಿತ್ಯ ,ಸಂಘಟನೆ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ನೀಡಿದ ಗಣನೀಯ ಸಾಧನೆಯನ್ನು ಗುರುತಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಈ ಗೌರವಕ್ಕೆ ಆಯ್ಕೆ ಮಾಡಿದೆ.

ಡಿ.1 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆರನೇ ಘಟಿಕೋತ್ಸವದ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಈ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ್ ಉಪಸ್ಥಿತರಿರುತ್ತಾರೆ ಎಂದು ರಾಜ್ಯ ಜಾನಪದ ವಿವಿಯ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಅವರ ಪ್ರಕಟಣೆ ತಿಳಿಸಿದೆ.

ಡಾ.ತಲ್ಲೂರು ಅವರು ಓರ್ವ ಶ್ರೇಷ್ಠ ಬರಹಗಾರನಾಗಿ, ಯಕ್ಷಗಾನ ಕಲಾವಿದನಾಗಿ, ಸಮಾಜ ಸೇವೆ, ಧಾರ್ಮಿಕ ಮುಂದಾಳು, ಸಂಘಟಕ, ಯಶಸ್ವಿ ಉದ್ಯಮಿ ಎಂಬ ಹೆಗ್ಗಳಿಕೆ ಹೊಂದಿರುವ ನಾಡಿನ ಅಪೂರ್ವ ಸಾಧಕರಾಗಿದ್ದಾರೆ.
ಸಾಹಿತ್ಯ ಲೋಕಕ್ಕೆ ಕೊಡುಗೆ: ಸಾಹಿತ್ಯ ಕ್ಷೇತ್ರದಲ್ಲಿ ಇವರು ರಚಿಸಿದ ಕಲಾ ಸಂಚಯ-ದಕ್ಷಿಣ ಭಾರತದ ಅನುಷ್ಠಾನ ಕಲೆಗಳು'ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ಪುಸ್ತಕ ಬಹುಮಾನ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರಿಂದ 2020ನೇ ಸಾಲಿನ ಪುಸ್ತಕ ಸೊಗಸು ತೃತೀಯ ಬಹುಮಾನಪಡೆದಿದ್ದಾರೆ.ತಮ್ಮ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಪುರಸ್ಕಾರ,ಕನ್ನಡ ಶಾಲೆಗಳ ಉಳಿವಿಗೆ ಆರ್ಥಿಕ ನೆರವು ನೀಡಿರುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಉದ್ದೇಶದಿಂದ ಧರ್ಮಂ ಚರ-ನಿತ್ಯ ಸತ್ಯಗಳು,ಮುಂಬೆಳಕು,ಹೊಂಬೆಳಕು, ಹೊಂಗಿರಣ,ಪಾಥೇಯ,ಪಥ ದೀಪಿಕಾ ಮೊದಲಾದ ಕೃತಿಗಳನ್ನು ರಚಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ. ಅಲ್ಲದೆ ಅನ್ಯ ಲೇಖಕರ ಕೃತಿಗಳನ್ನು ಪ್ರಕಟಿಸಿ ಜಿಲ್ಲೆಯ 200ಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ ತೆರಳಿ ಈ ಎಲ್ಲಾ ಕೃತಿಗಳ 25,000ಕ್ಕೂ ಅಧಿಕ ಪ್ರತಿಗಳನ್ನು ವಿದ್ಯಾಥಿಗಳಿಗೆ ಹಾಗೂ ವಾಚನಾಲಯಗಳಿಗೆ ಉಚಿತವಾಗಿ ಹಂಚಿರುವುದು ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ. ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಅವರು ಮಾಡಿ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆ.

ಜಾನಪದ ಕ್ಷೇತ್ರ: ಪ್ರಸ್ತುತ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಜಾನಪದ ಕ್ಷೇತ್ರಕ್ಕೆ ಡಾ.ತಲ್ಲೂರು ಅವರು ಅವಿಸ್ಮರಣೀಯ ಕೆಲಸ ಮಾಡುತ್ತಿದ್ದಾರೆ.

ಜಿಲ್ಲಾ ಕೇಂದ್ರ ಸೇರಿದಂತೆ ಅಲ್ಲಲ್ಲಿ ಜಾನಪವ ವೈಭವ ‘ ಕಾರ್ಯಕ್ರಮಗಳನ್ನು ಆಯೋಜಿಸಿ ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ನಡಸುತ್ತಾ, ಸಂಸ್ಥೆಗೆ ಹೊಸ ದಿಕ್ಕನ್ನು ನೀಡಿದ್ದಾರೆ. ರಂಗಭೂಮಿ ಉಡುಪಿ'ಅಧ್ಯಕ್ಷರಾಗಿ ಸಂಸ್ಥೆಯನ್ನು ಉನ್ನತಿಯ ಶಿಖರದತ್ತ ಕೊಂಡೊಯ್ದಿರುವ ಡಾ.ತಲ್ಲೂರು ಅವರು ಸಮಾಜದ ಹತ್ತು ಹಲವಾರು ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಮಾರ್ಗದರ್ಶನ ಮಾಡುತ್ತಾ ಜನಾನುರಾಗಿಯಾಗಿದ್ದಾರೆ. ಸೇವಾ ಕ್ಷೇತ್ರ : ಸಾಮಾಜಿಕ ರಂಗದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಆಗಿ,ಯಕ್ಷಗಾನ ಕಲಾವಿದರುಗಳ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ,ಭಾರತೀಯ ರೆಡ್‌ಕ್ರಾಸ್‌ನ ಉಡುಪಿ ಜಿಲ್ಲಾ ಸಭಾಪತಿಯಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.

ಯಕ್ಷಗಾನ ರಂಗದ ಉಳಿವು ಬೆಳವಣಿಗೆಗಾಗಿ ತನ್ನ ಮಾತಾಪಿತರು ತಲ್ಲೂರು ಕನಕ-ಅಣ್ಣಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿ ಪ್ರತೀ ವರ್ಷ ನಾಡಿನ ಸಾಧಕ ಕಲಾವಿದರಿಗೆ ಪ್ರದಾನ ಮಾಡುವ ಮೂಲಕ ನೈಜ ಯಕ್ಷ ಪ್ರೀತಿಯನ್ನು ಮೆರೆದಿದ್ದಾರೆ.

ಪ್ರಶಸ್ತಿ,ಗೌರವಗಳು:2018ರಲ್ಲಿ ಇಂಡಿಯನ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್ ಇವರಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, 2019ರಲ್ಲಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಕರ್ನಾಟಕ ರತ್ನ’ ಪ್ರಶಸ್ತಿ ಹಾಗೂ ಸಮಾಜ ಸೇವಾ ರತ್ನ'ಪ್ರಶಸ್ತಿ,

2017ರಲ್ಲಿಆರ್ಯಭಟಅಂತರಾಷ್ಟ್ರೀಯ ಪ್ರಶಸ್ತಿ, 2019 ರಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಬೆಂಗಳೂರು ಇವರಿಂದ ಜಗಜ್ಯೋತಿ ಬಸವೇಶ್ವರ ಕಾಯಕ ಶ್ರೀ'ಪ್ರಶಸ್ತಿ,2019ರಲ್ಲಿ ಆಲ್ ಇಂಡಿಯಾ ಅಚೀವರ್ಸ್ ಆಂಡ್ ರೀಸರ್ಚ್ ಅಕಾಡೆಮಿ ವತಿಯಿಂದಭಾರತ ಸೇವಾರತ್ನ ಗೋಲ್ಡ್ ಮೆಡಲ್ ‘ ಪ್ರಶಸ್ತಿ, 2019ರಲ್ಲಿಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ (ರಿ.) ಬೆಳಗಾವಿ ಇವರಿಂದ ಸಿರಿಗನ್ನಡ ರಾಷ್ಟ್ರೀಯ ಪ್ರಶಸ್ತಿ,2019ರಲ್ಲಿಕರ್ನಾಟಕ ಸುಗಮ ಸಂಗೀತ ಪರಿಷತ್ತು(ರಿ)ಬೆಂಗಳೂರು ಇವರಿಂದ ಕೈರಳೀ ಶ್ರೀ’ ಪ್ರಶಸ್ತಿ, 2019ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಇವರಿಂದ `ಸಾಧಕ ರತ್ನ ‘ ಪ್ರಶಸ್ತಿ, ಸೇರಿದಂತೆ ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮ ಸಾಧನಾ ಮುಡಿಗೇರಿಸಿ ಕೊಂಡಿದ್ದಾರೆ. ಅದೆಷ್ಟೋ ಸಂಘ ಸಂಸ್ಥೆಗಳು ಇವರ ಸಾಮಾಜಿಕ ಕೊಡುಗೆಯನ್ನು ಪರಿಗಣಿಸಿ, ಬಿರುದನ್ನಿತ್ತು ಸನ್ಮಾನಿಸಿವೆ.

ಹುಬ್ಬೇರಿಸುವಷ್ಟು ಸಾಧನೆಗಳು, ಪ್ರಶಂಸೆಗಳನ್ನು ಪಡೆದು ಸಾಮಾಜಿಕ ಮನ್ನಣೆ ಗಳಿಸಿದಿದ್ದರೂ, ತುಂಬಿದ ಕೊಡ ತುಳುಕದು ಎನ್ನುವ ಗಾದೆ ಮಾತಿನಂತೆ ನಿರಾಹಂಕಾರಿಯಾಗಿ ಎಲ್ಲರೊಂದಾಗುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರತಿಷ್ಠಿತ ಕರ್ನಾಟಕ ಜಾನಪದ ವಿವಿಯ `ಗೌರವ ಡಾಕ್ಟರೇಟ್ ‘ ಗೌರವಕ್ಕೆ ಆಯ್ಕೆ ಮಾಡಿರುವುದು ರಾಜ್ಯ ಜಾನಪದ ವಿವಿಯ ಗೌರವವನ್ನು ಹೆಚ್ಚಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.



Leave a Reply

Your email address will not be published. Required fields are marked *

error: Content is protected !!