ಚೀನಾದಲ್ಲಿ ಕೋವಿಡ್ ದಾಖಲೆ ಏರಿಕೆ- ಸಿಡಿದೆದ್ದ ಜನ
ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಸತತ ನಾಲ್ಕನೇ ದಿನವೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿವೆ. ಭಾನುವಾರ ಒಂದೇ ದಿನ ಸೋಂಕಿನ 40,000 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕು ಶೂನ್ಯಕ್ಕಿಳಿಸಲು ಅಧ್ಯಕ್ಷ ಷಿ ಜಿನ್‌ಪಿಂಗ್ ನೇತೃತ್ವದ ಸರ್ಕಾರ ಹೇರಿರುವ ಕಠಿಣ ಲಾಕ್‌ಡೌನ್ ವಿರೋಧಿಸಿ ದೇಶದಾದ್ಯಂತ ವ್ಯಾಪಕ ಜನಾಕ್ರೋಶವೂ ಭುಗಿಲೆದ್ದಿದೆ.
ದೇಶದಾದ್ಯಂತ ಸಾಮೂಹಿಕವಾಗಿ ಕೋವಿಡ್ ಪರೀಕ್ಷೆ ನಡೆಸುತ್ತಿದ್ದು, ಇದರಿಂದ ಶನಿವಾರ 35,858 ಲಕ್ಷಣರಹಿತ ಪ್ರಕರಣಗಳೂ ಸೇರಿ 39,501 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.
ಈ ನಡುವೆ, ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷ (ಸಿಪಿಸಿ) ಮತ್ತು ಷಿ ಜಿನ್‌ಪಿಂಗ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಾರಿ ಸಂಖ್ಯೆಯಲ್ಲಿ ಜನರು ಕಾಂಪೌಂಡ್ ಒಳಗೆ ಮತ್ತು ರಸ್ತೆಗಳಲ್ಲಿ ಪ್ರತಿಭಟಿಸಿದರು. ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಪ್ರತಿಭಟನೆಗೆ ಕೈಜೋಡಿಸಿದರು. ಹಲವು ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯ ದೃಶ್ಯಗಳ ವಿಡಿಯೊಗಳು ಟ್ವಿಟರ್ ಮತ್ತು ಚೀನಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದವು.
12 ಜನರ ಸಾವು: ರಾಜಧಾನಿ ಬೀಜಿಂಗ್, ಶಾಂಘೈ ಸೇರಿ ಹಲವು ನಗರಗಳಲ್ಲಿ ಕೋವಿಡ್ ಸೋಂಕು ತಡೆಗಟ್ಟಲು ಹಲವು ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದೆ. ಕಠಿಣ ಲಾಕ್‌ಡೌನ್ ವೇಳೆ, ಷಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿ ನಗರದಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಗುರುವಾರ ಬೆಂಕಿ ಕಾಣಿಸಿ, 12 ಜನರು ಮೃತಪಟ್ಟರು. ಇದರಿಂದ ಹಾನ್ ಚೀನಿ ಪ್ರಜೆಗಳು ಮತ್ತು ಉಯಿಗರ್ ಮುಸ್ಲಿಮರು ವಾರಾಂತ್ಯ ನಡೆಸಿದ ಬೃಹತ್ ಪ್ರತಿಭಟನೆಗೂ ಉರುಮ್ಕಿ ಸಾಕ್ಷಿಯಾಯಿತು. ಪರಿಣಾಮ ಸರ್ಕಾರ, ಅಲ್ಲಿ ಲಾಕ್‌ಡೌನ್ ಜಾರಿಯಿಂದ ಹಿಂದೆ ಸರಿಯಿತು.
ಪ್ರತಿಭಟನೆಗಳ ವಿಡಿಯೊಗಳು ಆನ್‌ಲೈನ್ ಮಾಧ್ಯಮ ಗಳಲ್ಲಿ ಪ್ರಸಾರವಾದ ನಂತರ, ‘ನಗರದಲ್ಲಿ ಕೋವಿಡ್ ನಿರ್ಬಂಧ ಹಂತಹಂತವಾಗಿ ತೆಗೆಯಲಾಗುವುದು’ ಎಂದು ಉರುಮ್ಕಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಹಾಂಗ್ ಕಾಂಗ್‌ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಭಾನುವಾರ ವರದಿ ಮಾಡಿದೆ. ಬೀಜಿಂಗ್‌ನಲ್ಲಿ ಪ್ರತಿಭಟನೆ ತೀವ್ರಗೊಂಡ ಕಾರಣಕ್ಕೆ, ಅಧಿಕಾರಿಗಳು ಲೌಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದರು.
‘ಕೆಲವು ಸ್ಥಳೀಯ ಸರ್ಕಾರಗಳು ವ್ಯಾಪಕವಾಗಿ ಲಾಕ್‌ಡೌನ್ ಹೇರುವುದು ಅಥವಾ ಸೋಂಕು ಪ್ರಸರಣದ ವಿರುದ್ಧ ಸಡಿಲ ಧೋರಣೆ ಅನುಸರಿಸುತ್ತಿರುವುದು ಕಂಡುಬಂದಿದೆ. ಸೋಂಕು ತಡೆಗೆ ಈ ಎರಡೂ ಪ್ರವೃತ್ತಿಗಳು ಸರಿಯಲ್ಲ’ ಎಂದು ಚೀನಿ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಪ್ರತಿಭಟನೆ ಹತ್ತಿಕ್ಕಲು ಪೆಪ್ಪರ್ ಸ್ಪ್ರೇ
ಚೀನಾದಲ್ಲಿ ನಡೆಯುತ್ತಿರುವ ಕೋವಿಡ್ ಲಾಕ್‌ಡೌನ್ ವಿರೋಧಿ ಪ್ರತಿಭಟನೆಗಳು ಭಾನುವಾರ ರಾಜಕೀಯ ಸ್ವರೂಪ ಪಡೆದವು. ಶಾಂಘೈನ ವುಲುಮುಖಿ ರಸ್ತೆಯಲ್ಲಿ ಶನಿವಾರ ರಾತ್ರಿಯಿಂದಲೇ ಭಾರಿ ಭದ್ರತೆ ಇದ್ದರೂ ಭಾನುವಾರ ಬೆಳಿಗ್ಗೆ ಸಾವಿರಾರು ಜನರು ಪ್ರತಿಭಟನೆಗೆ ಇಳಿದರು. ಉರುಮ್ಕಿ ರಸ್ತೆಯಲ್ಲಿ ಮಧ್ಯರಾತ್ರಿ ಸೇರಿದ್ದ ಸುಮಾರು 300 ಪ್ರತಿಭಟನಕಾರರ ಮೇಲೆ ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರು.
‘ಷಿ ಜಿನ್‌ಪಿಂಗ್ ಕೆಳಗಿಳಿಯಲಿ, ಸಿಪಿಸಿ ಅಧಿಕಾರದಿಂದ ತೊಲಗಲಿ’, ‘ನಮಗೆ ಪಿಸಿಆರ್ ಪರೀಕ್ಷೆ ಬೇಡ, ನಮಗೆ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಬೇಕು’ ಎಂಬ ಘೋಷಣೆಗಳು ಮೊಳಗಿದವು.
ಸತತ 3ನೇ ಬಾರಿಗೆ ಅಧ್ಯಕ್ಷರಾಗಿರುವ ಷಿ ಜಿನ್‌ಪಿಂಗ್ ಅವರಿಗೆ ದೇಶದಲ್ಲಿ ಉಲ್ಬಣಿಸುತ್ತಿರುವ ಕೋವಿಡ್, ಲಾಕ್‌ಡೌನ್ ವಿರೋಧಿ ಪ್ರತಿಭಟನೆ ಹಾಗೂ ಆರ್ಥಿಕ ಹಿಂಜರಿತ ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.