ಜನರನ್ನು ದರೋಡೆ ಮಾಡುವ ಸರಕಾರದ ಆದೇಶದ ವಿರುದ್ಧ ಪ್ರತಿಭಟಿಸುವ ಬದಲು ಪತ್ರ ಬರೆಯುವ ಉದ್ದೇಶ ಏನು….?

ಉಡುಪಿ: ರದ್ದಾಗುವ ಸುರತ್ಕಲ್ ಟೋಲ್ ಗೇಟಿನ ಸುಂಕವನ್ನೂ ಸೇರಿಸಿ ಹೆಜಮಾಡಿಯಲ್ಲಿ ಡಬಲ್ ಟೋಲ್ ವಸೂಲು ಮಾಡುವುದರ ವಿರುದ್ಧ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವ ಉಡುಪಿ ಶಾಸಕ ರಘುಪತಿ ಭಟ್ ಹೇಳಿಕೆ ಹಾಸ್ಯಾಸ್ಪದ. ಜನರ ಸಂಕಷ್ಟಗಳ ಬಗ್ಗೆ ನೈಜ ಕಾಳಜಿ ಇದ್ದರೆ ರಘುಪತಿ ಭಟ್ ಅವರು ಉಡುಪಿ ಜಿಲ್ಲೆಯ ಎಲ್ಲಾ ಐದು ಮಂದಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರನ್ನು ಕೂಡಿಕೊಂಡು ಟೋಲ್ ಹೆಸರಿನಲ್ಲಿ ಜನಸಾಮಾನ್ಯರನ್ನು ದರೋಡೆ ಮಾಡುವ ಸರಕಾರದ ಆದೇಶದ ವಿರುದ್ಧ ರೊಚ್ಚಿಗೆದ್ದು ಪ್ರತಿಭಟಿಸಬೇಕಿತ್ತು. ಎಲ್ಲಾ ಜನ ಪ್ರತಿನಿಧಿಗಳನ್ನು ಸಂಘಟಿಸಿ ಉಗ್ರ ಪ್ರತಿಭಟನೆ ಮಾಡಬೇಕಿತ್ತು. ಅದು ಬಿಟ್ಟು ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುತ್ತೇನೆ, ಸಂಸದರಿಗೆ ಪತ್ರ ಬರೆಯುತ್ತೇನೆ ಎಂದು ಬೂಟಾಟಿಕೆಯ ಹೇಳಿಕೆ ನೀಡುತ್ತಿರುವುದು ಅವರ ಉದ್ದೇಶದ ಬಗ್ಗೆ ಜನ ಸಾಮಾನ್ಯರಲ್ಲಿ ಸಂಶಯಕ್ಕೆ ಕಾರಣವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಕೊರೋನಾ ಹಾವಳಿ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿರುವ ಈ ಕಾಲಘಟ್ಟದಲ್ಲಿ ಕಡಿತಗೊಳ್ಳುವ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್‌ಗೆ ಸೇರಿಸಿ ಡಬ್ಬಲ್ ಸುಂಕ ವಸೂಲಿ ಮಾಡುವುದೆಂದರೆ ನೇರವಾಗಿ ಜನರ ಕಿಸೆಗೇ ಕನ್ನ ಹಾಕಿದಂತೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಇಂತಹ ಜನ ವಿರೋಧಿ ನಿರ್ಧಾರ ಕೈಗೊಳ್ಳುವಾಗ, ಅದೂ ಸಹ ಚುನಾವಣಾ ವರ್ಷದಲ್ಲಿ ಇಂತಹ ಜನ ವಿರೋಧಿ ಕೈಗೊಳ್ಳುವಾಗ ಒಬ್ಬ ಜನ ಪ್ರತಿನಿಧಿಯಾಗಿ ಶಾಸಕರು ಬರೇ ಪತ್ರ ಬರೆದು, ಪತ್ರಿಕಾ ಹೇಳಿಕೆ ನೀಡಿ ಅಥವಾ ಟ್ವೀಟ್ ಮಾಡಿ ಜನರ ಸಿಂಪತಿ ಗಳಿಸಲು ಪ್ರಯತ್ನಿಸುವ ಬದಲು ಫೀಲ್ಡಿಗಿಳಿದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿ. ಶಾಸಕ ಭಟ್ಟರ ನಿಯತ್ತು ಜನಪರವಾಗಿ ಇರುವುದೇ ಆದರೆ ಪ್ರತಿಭಟನಾ ನಿರತರ ಸದುದ್ದೇಶದ ಬಗ್ಗೆ ಸಂಶಯ ವ್ಯಕ್ತಪಡಿಸುವ ಬದಲು ಶಾಸಕರನ್ನು ಒಟ್ಟುಗೂಡಿಸಿ, ಸಂಸದರನ್ನು ಕರೆಸಿ ತಾವೇ ಪ್ರತಿಭಟನೆ ಆಯೋಜಿಸಲಿ ಎಂದು ರಮೇಶ್ ಕಾಂಚನ್ ಸವಾಲೆಸೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!