ಮತದಾರರ ಮಾಹಿತಿ ಕದ್ದ ಪ್ರಕರಣ- ಡಿಸಿ ಸಹಿತ ಇಬ್ಬರು ಅಧಿಕಾರಿಗಳ ಅಮಾನತು

ಬೆಂಗಳೂರು, ನ.25: ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಹಗರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿ ಸೇರಿದಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಆದೇಶ ಹೊರಡಿಸಿದೆ.
ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಉಸ್ತುವರಿವಹಿಸಿದ್ದ ಬಿಬಿಎಂಪಿ ವಿಶೇಷ ಆಯುಕ್ತ ಎಸ್.ರಂಗಪ್ಪ ಅವರನ್ನು ಅಮಾನತು ಮಾಡಿ ಕೇಂದ್ರ ಚುನಾವಣೆ ಆಯೋಗ ತನಿಖೆಗೆ ಆದೇಶಿಸಿದೆ.
ತನಿಖಾ ತಂಡ: ಚುನಾವಣಾ ಪೂರ್ವ ತಯಾರಿ ಪ್ರಕ್ರಿಯೆಯ ಮುಂದಿನ ಕಾರ್ಯವನ್ನು ಕೈಗೊಳ್ಳಲು ಐಎಎಸ್ ಅಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಇಲ್ಲಿನ ಶಿವಾಜಿನಗರಕ್ಕೆ, ಡಾ.ಆರ್.ವಿಶಾಲ್ ಅವರನ್ನು ಚಿಕ್ಕಪೇಟೆಗೆ ಹಾಗೂ ಅಜಯ್ ನಾಗಭೂಷಣ್ ಅವರನ್ನು ಮಹದೇವಪುರಕ್ಕೆ ನೇಮಕ ಮಾಡಲಾಗಿದೆ ಎಂದು ಆಯೋಗ ದೃಢಪಡಿಸಿದೆ.
ಇನ್ನೂ, ಉಜ್ವಲ್ ಘೋಷ್ (ಬಿಬಿಎಂಪಿ ಕೇಂದ್ರ), ರಾಮಚಂದ್ರನ್ ಆರ್ (ಬಿಬಿಎಂಪಿ ಉತ್ತರ), ಪಿ.ರಾಜೇಂದ್ರ ಚೋಳನ್ (ಬಿಬಿಎಂಪಿ ದಕ್ಷಿಣ) ಡಾ.ಎನ್.ಮಂಜುಳಾ (ಬೆಂಗಳೂರು ನಗರ) ಅವರನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಕ್ರಿಯೆ, ಮತದಾರರ ಪಟ್ಟಿ ಪರಿಷ್ಕರಣೆಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ.