ಒಂಟಿಯಾಗಿ ಬರುವ ಮಹಿಳೆಯರಿಗೆ ಮಸೀದಿ ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ
ನವದೆಹಲಿ ನ.24 : ದೆಹಲಿಯಲ್ಲಿರುವ ಜಾಮಾ ಮಸೀದಿಗೆ ಒಂಟಿಯಾಗಿ ಬರುವ ಮಹಿಳೆಯರಿಗೆ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಾಮಾ ಮಸೀದಿ ಪಿಆರ್ಒ ಸಬಿವುಲ್ಲಾ ಖಾನ್ ಅವರು, ಮಸೀದಿ ಆವರಣದಲ್ಲಿ ನಡೆಯುವ ಅನುಚಿತ ವರ್ತನೆಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. `ಮಸೀದಿಗೆ ಮಹಿಳೆಯರು ಪ್ರವೇಶಿಸದಂತೆ ನಿಷೇಧ ಹೇರಿಲ್ಲ. ಒಂಟಿಯಾಗಿ ಬರುವ ಮಹಿಳೆಯರಿಗೆ ಮಾತ್ರವೇ ನಿರ್ಬಂಧ ಅನ್ವಯವಾಗುತ್ತದೆ. ಕುಟುಂಬದೊಂದಿಗೆ ಅಥವಾ ಪತಿಯೊಂದಿಗೆ ಬರುವ ಮಹಿಳೆಯರಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗೂ ಮಹಿಳೆಯರು ಒಬ್ಬಂಟಿಯಾಗಿ ಬಂದಾಗ ಅನುಚಿತವಾಗಿ ವರ್ತಿಸುವುದು, ಟಿಕ್ಟಾಕ್ ಅಥವಾ ಡಾನ್ಸ್ ವಿಡಿಯೊಗಳನ್ನು ಚಿತ್ರೀಕರಿಸುವುದು ವರದಿಯಾಗುತ್ತಿವೆ. ಇವುಗಳಿಗೆ ತಡೆಯೊಡ್ಡುವುದಕ್ಕಾಗಿ ನಿಷೇಧ ಹೇರಲಾಗಿದೆ. ಕುಟುಂಬದೊಂದಿಗೆ ಬರುವವರಿಗೆ ಅಥವಾ ದಂಪತಿಗಳಿಗೆ ಯಾವುದೇ ನಿಬರ್ಂಧ ಇಲ್ಲ. ಧಾರ್ಮಿಕ ತಾಣವನ್ನು ಹುಡುಗರು, ಹುಡುಗಿಯರ ಭೇಟಿ ಸ್ಥಳವನ್ನಾಗಿಸುವುದು ತರವಲ್ಲ’ ಎಂದು ತಿಳಿಸಿದ್ದಾರೆ.
ಇನ್ನು ಮಸೀದಿಯ ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದು, ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಸೀದಿಯ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.