ಪ್ರಧಾನಿ ನರೇಂದ್ರ ಮೋದಿ ವೆಬ್‌ಸೈಟ್‌ನ ಟ್ವಿಟರ್ ಖಾತೆ ಹ್ಯಾಕ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ಗೆ ಲಿಂಕ್‌ ಆಗಿರುವ ಟ್ವಿಟರ್ ಖಾತೆ ಹ್ಯಾಕ್‌ ಆಗಿರುವುದನ್ನು ಗುರುವಾರ ಟ್ವಿಟರ್‌ ಖಚಿತ ಪಡಿಸಿದೆ. ಪರಿಹಾರ ನಿಧಿಗೆ ಕ್ರಿಪ್ಟೊಕರೆನ್ಸಿಗಳ ಮೂಲಕ ಸಹಾಯ ಮಾಡುವಂತೆ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ವೆಬ್‌ಸೈಟ್‌ ಖಾತೆಯಿಂದ ಮನವಿ ಪ್ರಕಟಗೊಂಡಿದೆ.

‘ಸಕ್ರಿಯವಾಗಿ ಪರಿಸ್ಥಿತಿಯ ತನಿಖೆ ನಡೆಸುತ್ತಿದ್ದೇವೆ. ಇತರೆ ಅಕೌಂಟ್‌ಗಳು ಇದರ ಪರಿಣಾಮಕ್ಕೆ ಒಳಗಾಗಿರುವ ಬಗ್ಗೆ ಪ್ರಸ್ತುತ ನಮ್ಮ ಗಮನಕ್ಕೆ ಬಂದಿಲ್ಲ’ ಎಂದು ಟ್ವಿಟರ್‌ ವಕ್ತಾರರು ತಿಳಿಸಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

@narendramodi_in ಟ್ವಿಟರ್‌ ಖಾತೆಯಲ್ಲಿ ಪ್ರಕಟಗೊಂಡಿದ್ದ ಪೋಸ್ಟ್‌ಗಳ ಕುರಿತು ಮೋದಿ ಅವರ ಕಚೇರಿಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ (www.narendramodi.in) ಮತ್ತು ನರೇಂದ್ರ ಮೋದಿ ಮೊಬೈಲ್‌ ಅಪ್ಲಿಕೇಷನ್‌ಗೆ ಅಧಿಕೃತ ಟ್ವಿಟರ್‌ ಖಾತೆಯಾಗಿ ಇದಾಗಿದೆ. ಈ ಟ್ವಿಟರ್‌ ಖಾತೆಯನ್ನು 25 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿ ಅವರ ವೈಯಕ್ತಿಕ ಟ್ವಿಟರ್‌ ಖಾತೆಯ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಆ ಖಾತೆಯನ್ನು 6.1 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ.

ಕೋವಿಡ್‌–19 ಹೋರಾಟಗಳಿಗಾಗಿ ಪ್ರಧಾನಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಬಿಟ್‌ಕಾಯಿನ್‌ ಮೂಲಕ ಧನ ಸಹಾಯ ಮಾಡಿ. ಭಾರತ ಈಗ ಕ್ರಿಪ್ಟೊಕರೆನ್ಸಿಗಳನ್ನು ಬಳಸುತ್ತಿದೆ ಎಂದು ಸರಣಿ ಟ್ವೀಟ್‌ಗಳು ಪ್ರಕಟಗೊಂಡಿದ್ದವು. ಟ್ವಿಟರ್ ಈಗ ಆ ಟ್ವೀಟ್‌ಗಳನ್ನು ತೆಗೆದು ಹಾಕಿದ್ದು, ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಮೋದಿ ಅವರ ವೆಬ್‌ಸೈಟ್‌ ಖಾತೆಯ ಮೂಲಕ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಗಮನವಿದ್ದು, ಅದನ್ನು ಸುರಕ್ಷಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಟ್ವಿಟರ್ ಹೇಳಿದೆ.

Leave a Reply

Your email address will not be published. Required fields are marked *

error: Content is protected !!