ಉಡುಪಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ-ಬಸ್ ಚಾಲಕನಿಗೆ 10 ವರ್ಷ ಶಿಕ್ಷೆ

ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದ ಆರೋಪಿ ದೋಷಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿರುವ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಆದೇಶಿಸಿದ್ದು ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕುಂದಾಪುರದ ಅಮಾಸೆಬೈಲು ನಿವಾಸಿ ಸುರೇಶ್ ಕೊಠಾರಿ ಎಂಬಾತ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದು ಈತ ಶಾಲೆಯೊಂದರ ಬಸ್ ಚಾಲಕನಾಗಿದ್ದ.

ಘಟನೆ ವಿವರ: ತಾನು ಕೆಲಸ ಮಾಡುತ್ತಿದ್ದ ಶಾಲಾ ಬಸ್ಸಿನಲ್ಲಿ ಆಯಾ ವೃತ್ತಿ ಮಾಡುತ್ತಿದ್ದ 17 ವರ್ಷದ ಯುವತಿಯನ್ನು ಪರಿಚಯ ದುರ್ಬಳಕೆ ಮಾಡಿಕೊಂಡ ಆರೋಪಿಯು ಆಕೆ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಘಟನೆ ದಿನ‌ ಶಾಲಾ ಮಕ್ಕಳನ್ನು ಬಿಟ್ಟ ಬಳಿಕ ಆಕೆಯಲ್ಲಿ ಮಾತನಾಡಲು ಇದೆಯೆಂದು ಹೇಳಿ ಬೈಕಿನಲ್ಲಿ ಕಾಡು ಪ್ರದೇಶಕ್ಕೆ ಕರೆದೊಯ್ದು ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿದ್ದು ನಂತರದ ದಿನಗಳಲ್ಲಿಯೂ ಆಕೆ ಇಚ್ಚೆ ವಿರುದ್ಧ ದೌರ್ಜನ್ಯ ಎಸಗಿದ್ದ. ಸಂತ್ರಸ್ತ ಬಾಲಕಿ ಗರ್ಭಿಣಿಯಾಗಿದ್ದು ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ತದನಂತರ ಆಕೆ, ಮಗುವನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು ನೊಂದ ಬಾಲಕಿ ತಾಯಿ ನೀಡಿದ ದೂರಿನ ಅನ್ವಯ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರ ಆರೋಪಿಯನ್ನು ಬಂಧಿಸಲಾಗಿದ್ದು ಆತ ನ್ಯಾಯಾಲಯದಿಂದ ಜಾಮೀನು ಕೂಡ ಪಡೆದಿದ್ದ. ಅಂದಿನ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದರು. ಒಟ್ಟು 30 ಸಾಕ್ಷಿಗಳ ಪೈಕಿ 16 ಸಾಕ್ಷಿಗಳ ವಿಚಾರಣೆ ನಡೆದಿತ್ತು. ನೊಂದ ಬಾಲಕಿ ಸಾಕ್ಷಿ, ಪ್ರಕರಣಕ್ಕೆ ಸಂಬಂಧಿಸಿದ ಪೂರಕ ಸಾಕ್ಷಿಗಳ ಸಹಿತ ಡಿ.ಎನ್.ಎ ವರದಿಯು ಆರೋಪಿ ಸುರೇಶ್ ದೋಷಿ ಎಂಬುದನ್ನು ಸಾಭೀತುಪಡಿಸುವಲ್ಲಿ ಅಭಿಯೋಜನೆಗೆ ಸಹಕಾರಿಯಾಗಿತ್ತು.

ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

ಶಿಕ್ಷೆ ಪ್ರಮಾಣ.. ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಕಠಿಣ ಜೈಲು, 10 ಸಾವಿರ ದಂಡ, ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯವೆಸಗಿದ್ದಕ್ಕೆ ಪೋಕ್ಸೊ ಕಾಯ್ದೆಯಡಿ 10 ವರ್ಷ ಜೈಲು (ಎರಡು ಜೈಲು ಶಿಕ್ಷೆ ಏಕಕಾಲಕ್ಕೆ ಅನುಭವಿಸಲು ಆದೇಶ), 10 ಸಾವಿರ ದಂಡ. ದಂಡ ತೆರಲು ತಪ್ಪಿದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ, ಸಂತ್ರಸ್ತೆಗೆ 1 ಲಕ್ಷ ಹಣ ಪರಿಹಾರ ನೀಡಲು ಸರ್ಕಾರಕ್ಕೆ ಆದೇಶಿಸಿದ ನ್ಯಾಯಾಲಯವು ಆರೋಪಿಗೆ ವಿಧಿಸಿದ 20 ಸಾವಿರ ದಂಡದಲ್ಲಿ ಸಂತ್ರಸ್ತೆಗೆ 15 ಸಾವಿರ ಹಾಗೂ 5 ಸಾವಿರ ಹಣ ಸರ್ಕಾರಕ್ಕೆ ಪಾವತಿಸಲು ಆದೇಶಿಸಿದೆ.

Leave a Reply

Your email address will not be published.

error: Content is protected !!