ಮಕ್ಕಳಿಗೆ ಯಕ್ಷಗಾನ ಕಲೆ ದಾಟಿಸುವುದು ಅತಿ ಅಗತ್ಯ: ಡಾ.ತಲ್ಲೂರು

ಉಡುಪಿ: ಯಕ್ಷಗಾನದಂತಹ ಕಲಾಪ್ರಕಾರದ ಉಳಿವು ಹಾಗೂ ಬೆಳವಣಿಗೆ ದೃಷ್ಟಿಯಿಂದ ಮಕ್ಕಳನ್ನು ಈ ಕಲೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುವುದು ಅತೀ ಆವಶ್ಯಕವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಅವರು ಮಂಗಳವಾರ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಸಂಸ್ಥೆಯ ಐವತ್ತರ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಂಡ ಯಕ್ಷ ಸಪ್ತೋತ್ಸವ'ಕಾರ್ಯಕ್ರಮದಲ್ಲಿ ಮೂರನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೃತ್ಯ,ಹಾಡುಗಾರಿಕೆ,ಅಭಿನಯ, ಮಾತು,ವೇಷಭೂಷಣ ಮೊದಲಾದ ಕಲೆಯಿಂದ ಪೂರ್ಣತ್ವ ಪಡೆದಿರುವ ಈ ಕಲಾಪ್ರಕಾರ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ.ಕಲಾವಿದನ ಆಡುಭಾಷೆ ಯಾವುದೇ ಆಗಿರಲಿ,ಆತ ರಂಗಸ್ಥಳದಲ್ಲಿ ಮಾತನಾಡುವುದು ಮಾತ್ರ ಶುದ್ಧ ಕನ್ನಡ. ಇದೊಂದು ಯಕ್ಷಗಾನ ಕಲೆಯ ವಿಶೇಷತೆಯಾಗಿದೆ. ಇಂತಹ ಕಲೆಯನ್ನು ಉಳಿಸಿ, ಬೆಳೆಸುವುದು ಸಮಾಜದ ಜವಾಬ್ದಾರಿಯಾಗಿದ್ದು, ಪ್ರೋತ್ಸಾಹಕರ ಅಗತ್ಯ ಹೆಚ್ಚಿದೆ ಎಂದು ಅವರು ತಿಳಿಸಿದರು. ಈ ಅಪೂರ್ವ ಕಲಾಪ್ರಕಾರವನ್ನು ಕಲಿಯುವ. ಕಲಿಸುವ ಉತ್ಸಾಹ ನಮ್ಮಲ್ಲಿರಬೇಕು. ಯಕ್ಷಗಾನವನ್ನು ಕಲಿಯಲು ವಯಸ್ಸು ಅಡ್ಡಿಯಲ್ಲ ಎಂದ ಅವರು ತಾವು 60ರ ಹರೆಯದಲ್ಲಿ ಯಕ್ಷಗಾನವನ್ನು ಕಲಿತು ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ,ಪ್ರಸ್ತುತ 300ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿರುವ ಬಗೆಯನ್ನು ವಿಮರ್ಶಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿ ಈ ಕಲೆಗೆ ಸಾಧ್ಯವಾದ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುವುದಾಗಿ ತಿಳಿಸಿದರು. ಅಲ್ಲದೆ ಪರಿಷತ್ತಿನ ವತಿಯಿಂದ ಯಕ್ಷಗಾನ ಕೇಂದ್ರದ ಸಹಕಾರದಲ್ಲಿಜಾನಪದ ವೈಭವ ‘ವನ್ನು ಇದೇ ರಂಗಮಂದಿರದಲ್ಲಿ ಆಯೋಜಿಸಲು ಉತ್ಸುಕನಾಗಿರುವುದಾಗಿ ಅವರು ತಿಳಿಸಿದರು.
ರಾಜ್ಯ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಜಿ.ಎಲ್.ಹೆಗಡೆ ಅವರು ಯಕ್ಷಗಾನ ಬೆಳವಣಿಗೆಯಲ್ಲಿ ಅನ್ಯ ಕಲೆಯ ಕೊಡುಗೆ'ವಿಷಯದಲ್ಲಿ ಉಪನ್ಯಾಸ ನೀಡಿ,ಪ್ರಾದೇಶಿಕ ಕಲಾಪ್ರಕಾರಗಳು ಯಕ್ಷಗಾನದಲ್ಲಿ ಮೇಳೈಸಿದ್ದು,ಅದು ತನ್ನ ಮೂಲಸ್ವರೂಪದಲ್ಲಿಯೇ ಮುಂದುವರಿಯುವ ಆವಶ್ಯಕತೆಯಿದೆ ಎಂದು ಅಭಿಪ್ರಾಯ ಪಟ್ಟರು. ದ.ಕ. ಸಹಕಾರಿ ಹಾಲುಒಕ್ಕೂಟ ಮಂಗಳೂರು ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ,ಯಕ್ಷಗಾನ ಕೇಂದ್ರ ತನ್ನ ನಿರಂತರ ಕಲಾ ಸೇವೆಯಲ್ಲಿ 3000ಕ್ಕೂ ಅಧಿಕ ಕಲಾವಿದರನ್ನು ರೂಪಿಸಿ, ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಅಭಿನಂದನೀಯ ಎಂದರು.ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಶ್ರೀಧರ ಪಿ.ಎಸ್.ಮಾತನಾಡಿ, ಯಕ್ಷಗಾನವನ್ನು ನೋಡುವ ಮನಸ್ಸುಗಳು ಹೆಚ್ಚಾಗಬೇಕು. ಕಲಾವಿದರಿಗೆ ಈ ಕಲೆಯನ್ನು ಗೌರವ ತಂದುಕೊಟ್ಟಿರುವುದಲ್ಲದೆ ಉತ್ತಮ ಜೀವನ ನಡೆಸಲು ಅವಕಾಶ ನೀಡಿದೆ ಎಂದರು. ಯಕ್ಷಗಾನ ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೇಸಿಐ ತರಬೇತುದಾರ ಶಿವರಾಮ ಕೆ.ಕೆ., ಚೇಂಪಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆಸ್ತಿಕ ಶಾಸ್ತಿçಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರುಗಳಾದ ಸರ್ವೋತ್ತಮ ವೈದ್ಯ, ಜಬ್ಬಾ ಮೆಂಡನ್ ಹಾಗೂಝ ಕೃಷ್ಣ ಗುಜರನ್ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕಲಾಕೇಂದ್ರದ ಅಭಿವೃದ್ಧಿ ಸಮಿತಿ ಸದಸ್ಯ ಬನ್ನಾಡಿ ಸಂತೋಷ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸೀತಾರಾಮ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವೇಶ್ವರ ಹೊಳ್ಳ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕಕರ್ಣ ಸೇನಾಧಿಪತ್ಯ-ಶಲ್ಯ ಸಾರಥ್ಯ ‘ಯಕ್ಷಗಾನ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!