ಪಬ್ಜಿ, ವಿಚಾಟ್ ವರ್ಕ್ ಸೇರಿ 118 ಮೊಬೈಲ್ ಆ್ಯಪ್ಗಳಿಗೆ ನಿಷೇಧ
ನವದೆಹಲಿ: ಪಬ್ಜಿ, ಪಬ್ಜಿ ಮೊಬೈಲ್ ಲೈಟ್, ವಿಚಾಟ್ ವರ್ಕ್, ವಿಚಾಟ್ ರೀಡಿಂಗ್ ಸೇರಿದಂತೆ 118 ಆ್ಯಪ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಹಿಂದೆ ಎರಡು ಬಾರಿ ಒಟ್ಟು ಚೀನಾದ ನೂರಕ್ಕೂ ಹೆಚ್ಚು ಆ್ಯಪ್ಗಳ ಮೇಲೆ ನಿಷೇಧ ಹೇರಲಾಗಿತ್ತು.
ದೇಶದ ರಕ್ಷಣೆ, ಸಾರ್ವಭೌಮತ್ವ, ಸಮಗ್ರತೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು 118 ಆ್ಯಪ್ಗಳನ್ನು ನಿಷೇಧಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಟಿಕ್ಟಾಕ್, ಶೇರ್ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್ ಮತ್ತು ವಿ–ಚಾಟ್ ಸೇರಿದಂತೆ 59 ಮೊಬೈಲ್ ಆ್ಯಪ್ಗಳನ್ನು ಕೇಂದ್ರ ಸರ್ಕಾರ ಜೂನ್ನಲ್ಲಿ ನಿಷೇಧಿಸಿತ್ತು. ಬಳಿಕ ಎರಡನೇ ಹಂತದಲ್ಲಿ ಜುಲೈನಲ್ಲಿ ಟಿಕ್ಟಾಕ್ ಲೈಟ್, ಹೆಲೊ ಲೈಟ್, ಶೇರ್ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್ವೈ ಲೈಟ್ ಸೇರಿದಂತೆ ಚೀನಾದ 47 ಆ್ಯಪ್ಗಳನ್ನು ನಿಷೇಧಿಸಿತ್ತು. ಇದೀಗ ಮೂರನೇ ಬಾರಿಗೆ ಕ್ರಮ ಕೈಗೊಂಡಿದೆ.
ಜೂನ್ 15ರಂದು ಪೂರ್ವ ಲಡಾಖ್ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಭಾರತ–ಚೀನಾ ಯೋಧರ ನಡುವೆ ನಡೆದಿದ್ದ ಸಂಘರ್ಷದ ಬಳಿಕ ಚೀನಾ ಆ್ಯಪ್ಗಳನ್ನು ನಿಷೇಧಿಸುವ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು.
ಎರಡು ಬಾರಿ ಚೀನಾ ಆ್ಯಪ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ದೇಶದಲ್ಲಿ ಪಬ್ಜಿಯೂ ನಿಷೇಧವಾಗಲಿದೆ ಎಂಬ ಊಹಾಪೋಹ ಹರಡಿತ್ತು. ಪಬ್ಜಿ ನಿಷೇಧ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರಿ ಚರ್ಚೆಯಾಗಿತ್ತು. ಪಬ್ಜಿ ಯಾವ ದೇಶದ್ದು, ಅದರ ಮೂಲ ಚೀನಾವೇ ಎಂಬ ಚರ್ಚೆಗಳೂ ನಡೆದಿದ್ದವು. ದಕ್ಷಿಣ ಏಷ್ಯಾ ಭಾಗದಲ್ಲಿ ಭಾರಿ ಜನಪ್ರಿಯ ಗೇಮ್ ಆಗಿರುವ ಪಬ್ಜಿಯ ಜನಪ್ರಿಯತೆ ಭಾರತ ಮತ್ತು ಪಾಕಿಸ್ತಾನದಲ್ಲಿ ಉತ್ತುಂಗದಲ್ಲಿದೆ. ಭಾರತವೊಂದರಲ್ಲಿ ಈ ಗೇಮ್ನ ಅಪ್ಲಿಕೇಷನ್ ಅನ್ನು 1.75 ಕೋಟಿ ಮಂದಿ ಮೊಬೈಲ್ಗಳಲ್ಲಿ ಅನುಸ್ಥಾಪಿಸಿಕೊಂಡಿದ್ದಾರೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಬ್ಜಿ ₹9,731 ಲಾಭಗಳಿಸಿದೆ ಎಂದು ಸುದ್ದಿಸಂಸ್ಥೆಯೊಂದು ಇತ್ತೀಚೆಗೆ ವರದಿ ಮಾಡಿತ್ತು.