ಬೈಂದೂರು: ಮಾದಕ ವಸ್ತು ಸಾಗಾಟ- ಮೂವರು ವಶಕ್ಕೆ

ಬೈಂದೂರು ನ.15(ಉಡುಪಿ ಟೈಮ್ಸ್ ವರದಿ): ತಾಲೂಕಿನ ಪಡುವರಿ ಗ್ರಾಮದ ಒತ್ತಿನೆಣೆ ಸಮೀಪ ಸೆಳ್ಳೆಕುಳ್ಳಿ ಕಡೆಗೆ ಹೋಗುವ ದಾರಿಯಲ್ಲಿ ಮಾದಕ ವಸ್ತು ಸಾಗಾಟದಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಸ್ತಾಪ ಸಲೀಂ ಸಾಬ್‌ ಮುಸ್ತಾಫ್‌(28), ಸಮೀರ್‌ಸಾಬ್‌(22) , ಕುಂದಾಪುರದ ಮೂಡುಗೋಪಾಡಿ ಗೋಪಾಡಿ ಗ್ರಾಮದ ಮೊಹಮ್ಮದ್‌ ಫೈಝಲ್‌(22) ಪೊಲೀಸರು ವಶಕ್ಕೆ ಪಡೆದುಕೊಂಡವರು.

ಕಾರಿನಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ

ಖಚಿತ ಮಾಹಿತಿ ಪಡೆದ ಬೈಂದೂರು ಠಾಣೆ ಪೊಲೀಸರು 

ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಒತ್ತಿನೆಣೆಯ ರಾಘವೇಂದ್ರ ಮಠದ ಸಮೀಪ ತೆರಳಿ ಸೆಳ್ಳೆಕುಳ್ಳಿ ಕಡೆಗೆ ಹೋಗುವ ಮಣ್ಣು ರಸ್ತೆಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ವಾಹನವನ್ನು ನಿಲ್ಲಿಸಿ ನೋಡುವಾಗ ಕಾರು ಬಂದು ನಿಂತಿದ್ದು, ಅದರಲ್ಲಿ 5 ಜನರು ಬೇರೆಯವರ ಬರುವಿಕೆಗಾಗಿ ಕಾಯುತ್ತಿರುವುದನ್ನು ಕಂಡು ದಾಳಿ ಮಾಡಿದಾಗ ಕಾರಿನಲ್ಲಿ ಇದ್ದವರು ಕಾರು ಚಲಾಯಿಸಿ ಪರಾರಿಯಾಗಲು ಪ್ರಯತ್ನಿಸಿದ್ದು, ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮುಸ್ತಾಪ ಸಲೀಂ ಸಾಬ್‌ ಮುಸ್ತಾಫ್‌, ಸಮೀರ್‌ಸಾಬ್‌ , ಮೊಹಮ್ಮದ್‌ ಫೈಝಲ್‌ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ದಾಳಿ ವೇಳೆ ಅಲ್ಫಾಜ್‌ ಹಾಗೂ ಸುಹೈಲ್‌ ಎಂಬ ಇಬ್ಬರು ಪರಾರಿಯಾಗಿದ್ದಾರೆ. 

ವಶಕ್ಕೆ ಪಡೆದ ಆರೋಪಿಗಳಿಂದ 70,000 ರೂ. ಮೌಲ್ಯದ 35.78 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು , 6 ಮೊಬೈಲ್, ಒಂದು ಕಾರು, ತಲ್ವಾರು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

error: Content is protected !!