ಮಲ್ಪೆ: ಟೈಮಿಂಗ್ ವಿವಾದ- ಬಸ್ ನಿರ್ವಾಹಕನಿಗೆ ಹಲ್ಲೆ

ಮಲ್ಪೆ ನ.15(ಉಡುಪಿ ಟೈಮ್ಸ್ ವರದಿ): ಟೈಮಿಂಗ್ ವಿಚಾರಕ್ಕೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ಬಸ್ ನ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹಲ್ಲೆಗೊಳಗಾದ ಟಿ.ಎಂ.ಟಿ ಬಸ್ ನ ನಿರ್ವಾಹಕರಾದ ನಯಾಜ್ ಯಾನೆ ಅಬ್ದುಲ್  ನಯಾಜ್ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ನಿನ್ನೆ ಮಧ್ಯಾಹ್ನದ ವೇಳೆ ಉಡುಪಿ ಸಿಟಿ ಬಸ್ಸ್ ನಿಲ್ದಾಣದಲ್ಲಿ ನಯಾಜ್ ಹಾಗೂ ಪಿಎಂಟಿ ಬಸ್ಸಿನ ನಿರ್ವಾಹಕರಾದ ನಾರಾಯಣ ಎಂಬುವರೊಂದಿಗೆ ಬಸ್ಸಿನ ಟೈಮಿಂಗ್ ವಿಷಯವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು.

ಬಳಿಕ ನಯಾಜ್ ಅವರು ಮಲ್ಪೆಯಿಂದ ಹೂಡೆಗೆ ಬಸ್ಸಿನಲ್ಲಿ  ಹೋಗುವಾಗ ಸಂಜೆ ವೇಳೆ ತೊಟ್ಟಂನ ಕರಾವಳಿ ಯುವಕ ಮಂಡಲದ ಬಳಿ ಇಬ್ಬರು ಬಸ್ಸನ್ನು  ನಿಲ್ಲಿಸಿದ್ದು ಬಸ್ಸಿನ ಚಾಲಕ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಉದ್ದೇಶದಿಂದ ಬಸ್ಸನ್ನು ನಿಲ್ಲಿಸಿದ್ದರು. ಈ ವೇಳೆ  ಹತ್ತು ಜನರು ಬಸ್ಸನ್ನು  ಹತ್ತಿದ್ದು, ಈ ಪೈಕಿ 4-5 ಜನರಲ್ಲಿ ಪಿಎಂಟಿ ಬಸ್ ನ ಚಾಲಕ ಗಣೇಶ, ಶಿಶಿರ  ಹಾಗೂ ವಿಜಯ ಎಂಬುವರು ನಯಾಜ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಬಸ್ಸಿನ  ಚಾಲಕರಾಗಿದ್ದ ನಯಾಜ್ ಅವರ ತಂದೆ ಅಬ್ದುಲ್ ನಜೀರ್ ಗಲಾಟೆಯನ್ನು ಬಿಡಿಸಿದ್ದು, ಆರೋಪಿಗಳು ಬಸ್ಸಿನಿಂದ ಇಳಿದು ಹೋಗಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹಾಗೂ ಆರೋಪಿತರು ಹಲ್ಲೆ ಮಾಡುವ ಸಮಯ ಬಸ್ಸಿನ ಟಿಕೇಟ್ ನೀಡುವ ಮಿಷಿನ್  ಓಡೆದು ಹೋಗಿದ್ದು, ನಯಾಜ್ ಅವರ ಮೊಬೈಲ್ ಬಿದ್ದು ಕಾಣೆಯಾಗಿರುತ್ತದೆ. ಅಲ್ಲದೆ ಆರೋಪಿತರು ಬಸ್ಸಿನಿಂದ ಹೋಗುವಾಗ ಹೆಲ್ಮೇಟಿನಿಂದ ಬಸ್ಸಿನ ಕಿಟಕಿಯ ಗ್ಲಾಸ್ ನ್ನು ಓಡೆದು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

error: Content is protected !!