ಶ್ರೀಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವೆಬ್‌ಸೈಟ್ ಅನಾವರಣ

ಉಡುಪಿ: ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯ್ಯ ಕಾಲದಲ್ಲಿ ಅಂಗಸಾಧನೆ, ಮಲ್ಲಸಾಧನೆಗಳ ಕೇಂದ್ರವಾಗಿದ್ದ ಪ್ರಸ್ತುತ ಕೋಟಿ ಚೆನ್ನಯರನ್ನು ಆರಾಧಿಸುವ 250ಕ್ಕೂ ಅಧಿಕ ಗರಡಿಗಳು ಕಾಸರಗೋಡು, ಮಡಿಕೇರಿ, ಮುಂಬೈ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಇವುಗಳ ಅಧ್ಯಯನ, ಸಂಶೋಧನೆ, ಹಿರಿಯರ ಚರಿತ್ರೆಯನ್ನು ಯುವ ಪೀಳಿಗೆ ನೀಡುವ ಉದ್ದೇಶದಿಂದ ವೆಬ್‌ಸೈಟ್ ರಚಿಸಲಾಗಿದೆ. ಇದರ ಅನಾವರಣ ಕಾರ್ಯಕ್ರಮ ಇದೇ ಬರುವ ನ.19ರಂದು ಬನ್ನಂಜೆಯ ನಾರಾಯಣಗುರು ಸಭಾಂಗಣದಲ್ಲಿ ನಡೆಯಲಿದೆ ಎಂದು ಶ್ರೀಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ದಾಮೋದರ ಕಲ್ಮಾಡಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸುಮಾರು 500 ವರ್ಷಗಳ ಹಿಂದೆ ಕೋಟಿ ಚೆನ್ನಯರು ಹುಟ್ಟಿ ಬೆಳೆದು ಬಾಳಿದ ಪಡುಮಲೆ, ಪಂಜ, ಎನ್ಮೂರುಗಳಲ್ಲಿ ಅವರ ಆಡಂಬೋಲದ ಜೀವಂತ ಕುರುಹುಗಳಿವೆ. ಇವುಗಳೆಲ್ಲವೂ ಅಧ್ಯಯನ ಯೋಗ್ಯ ವಿಷಯಗಳಾಗಿವೆ. ಕ್ರಮಬದ್ಧ ಸಂಶೋಧನೆ, ಅಧ್ಯಯನ ನಡೆಸಿ ನಮ್ಮ ಹಿರಿಯರ ಚರಿತ್ರೆ, ನಂಬಿಕೆ, ಆಚರಣೆಗಳ ಮಾಹಿತಿಗಳನ್ನು ಈ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ.ಈ ವೆಬ್‌ಸೈಟ್ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಲಭ್ಯವಿರುತ್ತದೆ ಎಂದರು

ಶ್ರೀಕ್ಷೇತ್ರ ಕಂಕನಾಡಿ ಗರೋಡಿಯ ಅಧ್ಯಕ್ಷ ಕೆ. ಚಿತ್ತರಂಜನ್ ವೆಬ್ ಸೈಟ್ ಅನಾವರಣ ಗೊಳಿಸಲಿದ್ದಾರೆ. ಬಳಿಕ‌ ಸಂಜೆ 5.30 ಕ್ಕೆ ಸೂರ್ಯೋದಯ ಪೆರಂಪಳ್ಳಿ ಅವರು ನಿರ್ಮಿಸಿ, ನಿರ್ದೇಶಿಸಿದ ರಾಜ್ಯ ಪ್ರಶಸ್ತಿ ವಿಜೇತ ದೇಯಿಬೈದೆತಿ ತುಳು ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಉಪಾಧ್ಯಕ್ಷ ಶೇಖರ್ ಕಲ್ಮಾಡಿ, ಕಾರ್ಯದರ್ಶಿ ಎಂ. ಮಹೇಶ್ ಕುಮಾರ್, ಚಿತ್ರ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ವಿಶ್ವಸ್ಥ ಹರೀಶ್ ಎಂ.ಕೆ., ಜಾನಪದ ಸಾಹಿತಿ ಚೆಲುವರಾಜ್ ಪೆರಂಪಳ್ಳಿ, ಕೋಶಾಧಿಕಾರಿ ಮಹೇಶ್ ಎನ್., ಜತೆ ಕಾರ್ಯದರ್ಶಿ ಶೇಖರ್ ಪೂಜಾರಿ ಉಪಸ್ಥಿತರಿದ್ದರು.  

Leave a Reply

Your email address will not be published. Required fields are marked *

error: Content is protected !!