ಉಡುಪಿ: ಉಚಿತ ಮಧುಮೇಹ ಕಣ್ಣಿನ ತಪಾಸಣಾ ಶಿಬಿರ

ಉಡುಪಿ: ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಪ್ರಸಾದ್‌ ನೇತ್ರಾಲಯ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ಕಣ್ಣಿನ ತಪಾಸಣಾ ಶಿಬಿರವು ಪ್ರಸಾದ್ ನೇತ್ರಾಲಯದಲ್ಲಿ ನಡೆಯಿತು.

ಮಧುಮೇಹದಿಂದ ಬಳಲುತ್ತಿರುವವರಿಗಾಗಿ ನಡೆದ ಈ ಶಿಬಿರವನ್ನು ಪ್ರಸಾದ್‌ ನೇತ್ರಾಲಯದ ರೆಟಿನಾ ತಜ್ಞ ಡಾ.ಶರತ್ ಹೆಗ್ಡೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಾಮಾನ್ಯವಾಗಿ ಕಂಡುಬರುವ ಮಧುಮೇಹ ಖಾಯಿಲೆಯಿಂದಾಗಿ ದೇಹದ ಮೇಲೆ ಆಗುವ ದುಷ್ಪರಿಣಾಮಗಳಲ್ಲಿ, ಕಣ್ಣಿನ ನರಗಳ ಮೇಲಾಗುವ ಪ್ರಭಾವವು ಅಧಿಕವಾಗಿದೆ. ಮಧುಮೇಹವಿರುವವರು ಇದರ ನಿಯಂತ್ರಣಕ್ಕಾಗಿ ನಿರಂತರ ಆಹಾರ ಪಥ್ಯ, ವ್ಯಾಯಾಮ, ಔಷಧೋಪಚಾರಗಳನ್ನು ನಡೆಸಿಕೊಂಡು ಬರುವುದರೊಂದಿಗೆ, ಪ್ರತೀ 6 ತಿಂಗಳಿಗೊಮ್ಮೆ ತಮ್ಮ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅವಶ್ಯಕವಾಗಿರುತ್ತದೆ. ಇದರ ಬಗ್ಗೆ ಸರಿಯಾದ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಕಣ್ಣಿನ ದೃಷ್ಟಿಯನ್ನು ಸಂಪೂರ್ಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.

ಪ್ರಸಾದ್ ನೇತ್ರಾಲಯದ ನೇತ್ರ ವೈದ್ಯೆ ಡಾ.ಅರ್ಚನಾ, ರೆಟಿನಾ ವಿಭಾಗದ ಪ್ರಮೀಳಾ ಹಾಗೂ ನೇತ್ರಜ್ಯೋತಿ ಕಾಲೇಜಿನ ಆಪ್ಪಮೆಟ್ರಿ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಎಂ.ವಿ.ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೇತ್ರಜ್ಯೋತಿ ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಖಾದರ್ ಧನ್ಯವಾದವಿತ್ತರು.

Leave a Reply

Your email address will not be published.

error: Content is protected !!