ಕಾಪು: ನ.12 (ನಾಳೆ) ಸುರತ್ಕಲ್ ಟೋಲ್ ತೆರವು ವಿಳಂಬ ನೀತಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಕಾಪು: ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ವಿಳಂಬ ನೀತಿ ಅನುಸರಿಸುವಿಕೆ, ಭವಿಷ್ಯದಲ್ಲಿ ಸರತ್ಕಲ್ ಟೋಲ್‌ನ್ನು ಹೆಜಮಾಡಿ ಟೋಲ್‌ಗೇಟ್‌ನ ಜೊತೆಗೆ ವಿಲೀನಗೊಳಿಸಿ ದರ ಏರಿಸುವ ಸಾಧ್ಯತೆಯನ್ನು ವಿರೋಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನ.12ರಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಕಾಪು ಪೇಟೆಯಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ.

ಸುರತ್ಕಲ್‌ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್‌ನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಈಗಾಗಲೇ ಪ್ರತಿಭಟನೆ ನಡೆಸಲಾಗಿದ್ದು ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಟೋಲ್ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರೂ ಇನ್ನೂ ತೆರವಾಗಿಲ್ಲ. ಮುಂದೆ ಸುರತ್ಕಲ್ ಟೋಲ್ ಹೆಜಮಾಡಿ ಟೋಲ್ ಜತೆ ವಿಲೀನ ಗೊಂಡರೆ ಅದರಿಂದ ವಾಹನ ಸವಾರರಿಗೆ ತೀವ್ರ ಬರೆ ಬೀಳಲಿದೆ. ಹೆಜಮಾಡಿ ಟೋಲ್‌ನ ಸುತ್ತಮುತ್ತಲಿನ ವ್ಯಾಪ್ತಿಗೆ ಬರುವ 5-7 ಕಿ.ಮೀ. ವ್ಯಾಪ್ತಿಯ ಜನರಿಗೆ ಉಚಿತ ಪಾಸ್ ನೀಡುವ ಬಗ್ಗೆ ನೀಡಿರುವ ಮನವಿಗೂ ಯಾವುದೇ ಪುರಸ್ಕಾರ ದೊರಕಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನಾ ಧರಣೆ ನಡೆಸಲು ಉದ್ದೇಶಿಸಿದೆ.

ಸಾರ್ವಜನಿಕರು ಮತ್ತು ವಾಹನ ಸವಾರರ ಪರವಾಗಿ ನಡೆಯುವ ಪ್ರತಿಭಟನಾ ಸಭೆಯಲ್ಲಿ ಕಾಪು ಕ್ಷೇತ್ರದ ನಾಗರಿಕರು, ಪಕ್ಷದ ಪದಾಽಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಮನವಿ ಮಾಡಿದ್ದಾರೆ.

Leave a Reply

Your email address will not be published.

error: Content is protected !!