ಮೂಡುಬಿದಿರೆ: ಡೆತ್ ನೋಟ್ ಬರೆದಿಟ್ಟು ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ- ವೃದ್ಧನ ಸೆರೆ

ಮೂಡುಬಿದಿರೆ ನ.11: ಎರಡು ದಿನಗಳ ಹಿಂದೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀಧರ ಪುರಾಣಿಕ ಬಂಧಿತ ಆರೋಪಿ. ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ  ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್‌ ನೋಟ್‌ನಲ್ಲಿ ಶ್ರೀಧರ ಪುರಾಣಿಕನ ಹೆಸರನ್ನು ಉಲ್ಲೇಖೀಸಿ, ಆತನ ಲೈಂಗಿಕ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿ ಶ್ರೀಧರ ಪುರಾಣಿಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂಲತಃ ಬೈಲೂರಿನವಳಾದ ಹುಡುಗಿಯು ಮೂಡುಬಿದಿರೆಯ ಹೊರವಲಯದಲ್ಲಿರುವ ಹೌದಾಲ್‌ನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದು ಪ.ಪೂ. ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಳು. 17ರಹರೆಯದ ವಿದ್ಯಾರ್ಥಿನಿ ಮಂಗಳವಾರ ಕಾಲೇಜಿಗೆ ಹಾಜರಾಗಿದ್ದು, ವಿಪರೀತ ಕಿವಿನೋವು ಇರುವುದಾಗಿ ಆಕೆ ಕಾಲೇಜಿನಲ್ಲಿ ತಿಳಿಸಿದ್ದ ಹಿನ್ನೆಲೆಯಲ್ಲಿ ಕಾಲೇಜಿನಿಂದ ಆಕೆಯ ಪೋಷಕರೊಬ್ಬರಿಗೆ ಕರೆಮಾಡಿ ಆಕೆಯನ್ನು ಕರೆದುಕೊಂಡು ಹೋಗಲು ಸೂಚಿಸಿದ್ದರೆನ್ನಲಾಗಿದೆ.

ಕರೆ ಸ್ವೀಕರಿಸಿದ ಆಕೆಯ ಪೋಷಕರೊಬ್ಬರು ಕೆಲಸದ ಒತ್ತಡದಲ್ಲಿರುವುದರಿಂದ ಆರೋಪಿ ಪುರಾಣಿಕನಿಗೆ ಆಕೆಯನ್ನು ಕಾಲೇಜಿನಿಂದ ಕರೆತರುವಂತೆ ಸೂಚಿಸಿದ್ದಾರೆ. ಸಂತ್ರಸ್ಥೆಯ ಪೋಷಕರು ಆರೋಪಿ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಕಾರಣ ಪರಿಚಯಸ್ಥ ಪುರಾಣಿಕ ಆಕೆಯನ್ನು ತನ್ನ ಕಾರಿನಲ್ಲಿ ಮನೆಯತ್ತ ಕರೆದುಕೊಂಡು ಬರುವಾಗ ಕಾರು ನಿಲ್ಲಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಇದರಿಂದ ಮನನೊಂದ ಆಕೆಯು ಬುಧವಾರ ತನ್ನ ವಾಸ್ತವ್ಯದ ಮನೆಯ ಸಮೀಪದ ಹಾಡಿಯ ಮರವೊಂದಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಳೆನ್ನಲಾಗಿದೆ.

ವಿದ್ಯಾರ್ಥಿನಿಯು ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯಿದೆ, ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ದಂಡ ಸಂಹಿತೆಯ ಆಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

error: Content is protected !!