ಉಡುಪಿ ಎಸ್.ಡಿ.ಎಂ ಆಯುರ್ವೇದ ಆಸ್ಪತ್ರೆ: ಫ್ರಾನ್ಸ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಉಡುಪಿ ನ.10(ಉಡುಪಿ ಟೈಮ್ಸ್ ವರದಿ): ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಅಹಿಂಸಾ ಫೌಂಡೇಶನ್ ವತಿಯಿಂದ ಫ್ರಾನ್ಸ್ ವಿದ್ಯಾರ್ಥಿಗಳಿಗಾಗಿ 3 ವಾರಗಳ ಕಾರ್ಯಾಗಾರವನ್ನು ಆರಂಭಿಸಲಾಗಿದೆ.
ಕಾರ್ಯಾಗಾರವನ್ನು ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ., ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್., ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಲತಾ ಕಾಮತ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ವೀರಕುಮಾರ ಕೆ. ಅವರು ಸೇರಿ ಉದ್ಘಾಟಿಸಿದರು.

ಕಾರ್ಯಾಗಾರ ಸಮಿತಿಯ ಅಧ್ಯಕ್ಷರಾದ ಡಾ. ಶ್ರೀಲತಾ ಕಾಮತ್ ಪ್ರಸ್ತಾವಿಕ ಭಾಷಣ ಮಾಡಿ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಆಯುರ್ವೇದ ಶಾಸ್ತ್ರದ ಅಧ್ಯಯನಕ್ಕೆ ಆಸ್ಪತ್ರೆಯು ಸಂಪೂರ್ಣ ಸಹಕಾರ ನೀಡುವುದಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ರವರು ತಿಳಿಸಿದರು. ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿದೇಶಗಳಲ್ಲಿ ಆಯುರ್ವೇದವನ್ನು ಪ್ರಚಾರ ಪಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹೀಗೆ ಆರ್ಯುರ್ವೇದವು ಎಲ್ಲೆಡೆ ಪಸರಿಸುವಂತಾಗಲಿ ಎಂದು ಡಾ. ಮಮತಾ ಕೆ.ವಿ. ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಅರ್ಚನಾ ಶುಕ್ಲ, ಡಾ. ಶರೋನ್ ಸೆಬಾಶ್ಟಿಯನ್, ಡಾ. ರಶ್ಮಿ ಎಚ್.ಸಿ., ಡಾ.ಅಪರ್ಣಾ ಕೆ., ಡಾ. ಗಾಯತ್ರಿ ಹೆಗ್ಡೆ ಉಪಸ್ಥಿತರಿದ್ದರು. ಡಾ.ಚೈತ್ರ ಸ್ವಾಗತಿಸಿದರು. ಡಾ. ಸರಿತಾ ಟಿ. ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಅರುಣ್ ಕುಮಾರ್ ವಂದಿಸಿದರು.ಈ ಕಾರ್ಯಾಗಾರವು ನ. 25 ರವರೆಗೆ ನಡೆಯಲಿದ್ದು, ಕಾರ್ಯಾಗಾರದಲ್ಲಿ ಔಷಧ ದ್ರವ್ಯಗಳ ಸಂಗ್ರಹಣೆ, ನಿರ್ಮಾಣ, ಆರ್ಯುರ್ವೇದದ ವಿಶಿಷ್ಟ ಚಿಕಿತ್ಸಾ ವಿಧಾನಗಳ ಪರಿಚಯ ಹಾಗೂ ಅವುಗಳ ಪ್ರಾತ್ಯಕ್ಷಿಕೆಯನ್ನು ವಿಶೇಷವಾಗಿ ಹೇಳಿ ಕೊಡಲಾಗುವುದು.