ಒಳಮೀಸಲಾತಿಯಲ್ಲಿ ಕ್ಷೌರಿಕ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಎಂ.ಬಿ ಶಿವಕುಮಾರ್
ಬೆಂಗಳೂರು, ಸೆ. 02(ಉಡುಪಿಟೈಮ್ಸ್ ವರದಿ): ಒಳಮೀಸಲಾತಿಯಲ್ಲಿ ಕ್ಷೌರಿಕ ಸಮುದಾಯಕ್ಕೆ ಹೆಚ್ಚಿನ ಮಾನ್ಯತೆ ನೀಡಿ ಎಂದು ಕ್ಷೌರಿಕ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ ಶಿವಕುಮಾರ್* ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಆಗಸ್ಟ್ 28 ರಂದು ಭಾರತದ ಸರ್ವೋಚ್ಚ ನ್ಯಾಯಾಲಯ ಒಳಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮತ್ತು ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ನೀಡಲು ರಾಜ್ಯ ಸರಕಾರಗಳಿಗೆ ಅಧಿಕಾರ ಇದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಸಚಿವರು ಆದಂತಹ ಗೋವಿಂದ ಎಂ ಕಾರಜೋಳರವರು ಸದರಿ ತೀರ್ಪಿನ ಬಗ್ಗೆ ಮಾತನಾಡುತ್ತಾ ತೀರ್ಪಿನಲ್ಲಿರುವ ಆಶಯವನ್ನು ಪರಿಗಣಿಸುತ್ತಾ ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದೆ ಮತ್ತು ಸಂಪುಟದಲ್ಲಿ ಈ ವಿಷಯ ಕುರಿತಂತ ಚರ್ಚೆ ಮಾಡುತ್ತೇವೆ ಎಂದು ಹೇಳಿರುವುದನ್ನು ಕ್ಷೌರಿಕ ಮೀಸಲಾತಿ ಒಕ್ಕೂಟ ಸ್ವಾಗತಿಸುತ್ತದೆ.
ಕ್ಷೌರಿಕ ವೃತ್ತಿಯಲ್ಲೇ ಬದುಕು ಕಟ್ಟಿಕೊಂಡಿರುವ ನಮ್ಮ ಕ್ಷೌರಿಕ ಸಮಾಜ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 2ಎ ನಲ್ಲಿ ಇದೆ. ಈ ಪಟ್ಟಿಯಲ್ಲಿ ಸುಮಾರು 102 ಜಾತಿಗಳಿದ್ದು ಅದರಲ್ಲಿರುವಂತಹ ಬಲಿಷ್ಠ ಜಾತಿಗಳು ಇಲ್ಲಿರುವ 15% ಶೇಕಡಾ ಮೀಸಲಾತಿಯನ್ನು ತಾವೇ ಪಡೆಯುತ್ತಿವೆ. ಈಗಿರುವ ಮೀಸಲಾತಿ ಹೇಗಿದೆ ಎಂದು ಹೇಳುವುದಾದರೆ ಒಂದು ಅನ್ನದ ರಾಶಿಯನ್ನು ಗುಡ್ಡೆಹಾಕಿ ಆ ಗುಡ್ಡೆಯಲ್ಲಿ ಹುಲಿ, ಸಿಂಹ, ಆನೆ, ಚಿರತೆ ಇಂತಹ ಬಲಿಷ್ಠ ಪ್ರಾಣಿಗಳ ಜೊತೆಯಲ್ಲಿ ಕ್ಷೌರಿಕರು ಇರುವೆ ಮರಿಗಳಂತೆ ಹಂಚಿಕೊಳ್ಳುವಂತಹ ಪರಿಸ್ಥಿತಿ ಇದೆ.
ಇದರಿಂದಾಗಿ ಅತ್ಯಂತ ಹಿಂದುಳಿದವರಲ್ಲಿ ಅತಿ ಹಿಂದುಳಿಂತಹ ದಿನ ನಿತ್ಯ ಅಪಮಾನ ದೌರ್ಜನ್ಯ ಜಾತಿ ನಿಂದನೆಗೆ ಒಳಪಟ್ಟಿರುವ ಕ್ಷೌರಿಕ ಸಮಾಜಕ್ಕೆ ಕ್ಷೌರಿಕರ ಪಾಲು ಸಮರ್ಪಕವಾಗಿ ದೊರಕುತ್ತಿಲ್ಲ. ಇದನ್ನು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದ ಮೀಸಲಾತಿ ಹಂಚಿಕೆಯ ಅಂಕಿ ಅಂಶಗಳೇ ಈ ಸತ್ಯವನ್ನು ಸಾರುತ್ತಿವೆ. ಇಂತಹ ಸಂಧರ್ಭದಲ್ಲಿ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ವರ್ಗಕ್ಕೆ ಈಗಿನ ತೀರ್ಪು ಆಶಾಕಿರಣವನ್ನು ಮೂಡಿಸಿದೆ. ಆದ್ದರಿಂದ ಹಿಂದುಳಿದ ವರ್ಗಗಳಲ್ಲೇ ಅತಿ ಹಿಂದುಳಿದ ವರ್ಗಗಳಾದಂತಹ ಕ್ಷೌರಿಕ ಸಮುದಾಯಕ್ಕೆ ಒಳಮೀಸಲಾತಿ ನೀಡಿ ಸಂವಿಧಾನದ ಆಶಯವನ್ನು ಪೂರೈಸಬೇಕೆಂದು ಸರಕಾರಕ್ಕೆ ವಿನಯಪೂರ್ವಕವಾಗಿ ಒತ್ತಾಯಿಸಿದ್ದಾರೆ.