ಉಡುಪಿ: ಜಿಲ್ಲಾ ಮಟ್ಟದ ಡ್ರಾಯಿಂಗ್ ಸ್ಪರ್ಧೆ

ಉಡುಪಿ ನ.9(ಉಡುಪಿ ಟೈಮ್ಸ್ ವರದಿ): ಮಾನವ ಬಂಧುತ್ವ ವೇದಿಕೆ ಕರ್ನಾಟಕ, ಉಡುಪಿ ಸಂಚಲನ ಸಮಿತಿ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಸಹಕಾರದೊಂದಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಚಿತ್ರ (ಡ್ರಾಯಿಂಗ್) ಬಿಡಿಸುವ ಸ್ಪರ್ಧೆಯನ್ನು ನ.13ರಂದು ಬೆಳಿಗ್ಗೆ 10 ಗಂಟೆಗೆ ಉದ್ಯಾವರದ ಝೇವಿಯರ್ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಈ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯುತ್ತಿದ್ದು 1ರಿಂದ 4ನೇ ತರಗತಿ ಮಕ್ಕಳಿಗೆ “ಪರಿಸರ”, 5 ರಿಂದ 7ನೇ ತರಗತಿ ಮಕ್ಕಳಿಗೆ “ಸಂಭ್ರಮ”, ಮತ್ತು 8 ರಿಂದ 10ನೇ ತರಗತಿ ಮಕ್ಕಳಿಗೆ “ಮಕ್ಕಳು ಕಂಡ ನೆಹರು” ಎಂಬ ವಿಷಯದ ಕುರಿತು ಚಿತ್ರಪಡಿಸುವ ಸ್ಪರ್ಧೆ ನಡೆಸಲಾಗುತ್ತಿದೆ.

ಈ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ 3 ವಿಭಾಗಗಳಲ್ಲಿಯೂ ಪ್ರತ್ಯೇಕ ಪ್ರಥಮ, ದ್ವಿತೀಯ, ತೃತೀಯ ಇರಲಿದ್ದು, ಪ್ರತಿ ವಿಭಾಗದಲ್ಲೂ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.

ಸ್ಪರ್ಧೆಯು ಎರಡು ಗಂಟೆಗಳ ಅವಧಿಯಲ್ಲಿ ನಡೆಯಲಿದ್ದು, ಡ್ರಾಯಿಂಗ್ ಹಾಳೆಯನ್ನು ಮಾತ್ರ ನೀಡಲಾಗುವುದು. ಉಳಿದ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳೇ ದೊರೆತಕ್ಕದ್ದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಫಲಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಸ್ಪರ್ಧಾ ಕಾರ್ಯಕ್ರಮದಲ್ಲಿ “ಉಡುಪಿ ಟೈಮ್ಸ್” ಮೀಡಿಯಾ ಪಾರ್ಟನರ್ ಆಗಿ ಭಾಗವಹಿಸುತ್ತಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳು ಸ್ಥಳದಲ್ಲೇ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಲ.ಸ್ಟೀವನ್ ಕುಲಾಸೊ 9901701381.

Leave a Reply

Your email address will not be published. Required fields are marked *

error: Content is protected !!