ಕಾಲೇಜಿನ ಬೀಗ ಮುರಿದು 75 ಸಾವಿರ ರೂ. ಮೌಲ್ಯದ ವಸ್ತು ಕಳವು

ಮಲ್ಪೆ ನ.8 (ಉಡುಪಿ ಟೈಮ್ಸ್ ವರದಿ): ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. 

ಈ ಬಗ್ಗೆ ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ಪ್ರಾಚಾರ್ಯರಾದ ವರ್ಗೀಸ್ ಪಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ನ.5 ರಂದು ಮಧ್ಯಾಹ್ನದ ವೇಳೆ ಕಾಲೇಜಿನ ಕೊಠಡಿಗಳಿಗೆ ಬೀಗ ಹಾಕಿ ಹೋಗಿದ್ದರು. ಆದರೆ ನ.7 ರಂದು ಬೆಳಿಗ್ಗೆ 9 ಗಂಟೆ ವೇಳೆ ಕಾಲೇಜಿಗೆ ಬಂದು ನೋಡುವಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ.

ಕಾಲೇಜಿನ ಪ್ರಾಚಾರ್ಯರ ಕೊಠಡಿ ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು ಕಪಾಟಿನ ಬೀಗ ಮುರಿದು ಅದರಲ್ಲಿದ್ದ ಸರ್ಕಾರದಿಂದ ಜಿಲ್ಲಾ ಮಟ್ಟದ ಉತ್ತಮ ಫಲಿತಾಂಶಕ್ಕಾಗಿ ಕೊಟ್ಟ ಚಿನ್ನದ ಪದಕಗಳು ಹಾಗೂ 5,100 ನಗದು ಸೇರಿ ಒಟ್ಟು 75,100 ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಅಲ್ಲದೇ ಕಾಲೇಜಿನ ಕಂಪೌಂಡಿನ ಒಳಗೆ ಇರುವ ಸರ್ಕಾರಿ ಪ್ರೌಡಶಾಲಾ ವಿಭಾಗದ ಮುಖ್ಯೋಪಾಧ್ಯಾಯರ ಕೊಠಡಿ ಮತ್ತು ಕಛೇರಿಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!