ಪತ್ನಿಯ ಟಿಕ್‍ಟಾಕ್-ಇನ್‍ಸ್ಟಾಗ್ರಾಮ್‍ ಹುಚ್ಚಿಗೆ ಬೇಸತ್ತ ಪತಿರಾಯ ಏನು ಮಾಡಿದ ಗೊತ್ತಾ…?

ಚೆನ್ನೈ ನ.8 : ತಮಿಳುನಾಡಿನಲ್ಲಿ ಸದಾ ಕಾಲ ಸೋಷಿಯಲ್ ಮೀಡಿಯಾ ರೀಲ್ಸ್ ಮಾಡುತ್ತಿರುವುದನ್ನು ನೋಡಿ ಬೇಸತ್ತ ಗಂಡನೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ದಿಂಡುಗಲ್‍ನ ಅಮೃತಲಿಂಗಂ (38) ಪ್ರಕರಣದ ಆರೋಪಿ, ಚಿತ್ರಾ ಕೊಲೆಯಾದ ಮಹಿಳೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹೆಂಡತಿಯನ್ನು ಕೊಂದ ಅಮೃತಲಿಂಗಂನನ್ನು ಪೆರುಮಾನಲ್ಲೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಮೃತಲಿಂಗಂ ಚಿತ್ರಾಳನ್ನು ಮದುವೆಯಾಗಿ ತಿರುಪುರದ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದ. ಈತ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ. ಅಮೃತಲಿಂಗಂನ ಪತ್ನಿ ಚಿತ್ರಾ ಅವರು ಗಾಮೆರ್ಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಟಿಕ್‍ಟಾಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ರೀಲ್‍ಗಳನ್ನು ಪೋಸ್ಟ್ ಮಾಡುವ ಅಭ್ಯಾಸವನ್ನು ಹೊಂದಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ರೀಲ್‍ಗಳನ್ನು ಮಾಡಲು ದಿನದ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ಇದರಿಂದ ಆಕೆಯ ಗಂಡ ಕೋಪಗೊಂಡಿದ್ದ. ಇದೇ ಕಾರಣದಿಂದ ಆರೋಪಿ ಭಾನುವಾರ ರಾತ್ರಿ ತನ್ನ ಪತ್ನಿಯನ್ನು ಆಕೆಯ ಶಾಲಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ ಎನ್ನಲಾಗಿದೆ.

ಚಿತ್ರಾಳ ಇನ್ ಸ್ಟಾಗ್ರಾಂನಲ್ಲಿ ಫಾಲೋವರ್ ಗಳ ಸಂಖ್ಯೆ ಹೆಚ್ಚಾದ ನಂತರ ಅವರು ಇನ್ನಷ್ಟು ಅದಕ್ಕೆ ಅಡಿಕ್ಟ್ ಆಗಿದ್ದರು. ತಾನು ದೊಡ್ಡ ನಟಿಯಾಗಬೇಕು ಎಂದು ಬಯಸಿದ ಆಕೆ ಹೆಚ್ಚೆಚ್ಚು ರೀಲ್ಸ್ ಗಳನ್ನು ಮಾಡತೊಡಗಿದ್ದರು. ಎರಡು ತಿಂಗಳ ಹಿಂದೆ ಚೆನ್ನೈಗೆ ತೆರಳಿದ್ದ ಆಕೆಯ ಇನ್‍ಸ್ಟಾಗ್ರಾಂ ಖಾತೆಯಲ್ಲಿ 33 ಸಾವಿರ ಫಾಲೋವರ್ ಗಳನ್ನು ಹೊಂದಿದ್ದರು. ಗಂಡನಿಂದ ದೂರ ಹೋಗಿ ಚೆನ್ನೈನಲ್ಲಿದ್ದ ಆಕೆ ಕಳೆದ ವಾರ ತನ್ನ ಮಗಳ ಮದುವೆಗೆಂದು ಊರಿಗೆ ವಾಪಾಸ್ ಬಂದಿದ್ದರು. ಮದುವೆ ಮುಗಿಸಿ ಅವಳು ಚೆನ್ನೈಗೆ ಹೊರಡಲು ತಯಾರಾಗುತ್ತಿದ್ದಳು, ಆದರೆ ಅಮೃತ ಲಿಂಗಂಗೆ ಅವಳು ಚೆನ್ನೈಗೆ ಹೋಗುವುದು ಇಷ್ಟವಿರಲಿಲ್ಲ. ಚಿತ್ರಾ ರೀಲ್ ಗಳನ್ನು ಅಪ್ ಲೋಡ್ ಮಾಡುವ ಬಗ್ಗೆ ಮತ್ತು ಚಲನಚಿತ್ರಗಳಲ್ಲಿ ನಟಿಸಲು ಬಯಸಿದ್ದಕ್ಕೆ ಭಾನುವಾರ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿದಾಗ ಅಮೃತಲಿಂಗಂ ಚಿತ್ರಾಳ ಕುತ್ತಿಗೆಯನ್ನು ಅವಳ ಶಾಲಿನಿಂದ ಕಟ್ಟಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಆಕೆ ಮೂರ್ಛೆ ಹೋದಾಗ ಅಮೃತಲಿಂಗಂ ಗಾಬರಿಗೊಂಡು ಮನೆಯಿಂದ ಹೊರಟು ಹೋಗಿದ್ದಾನೆ. ಎದುರು ಸಿಕ್ಕ ಮಗಳ ಬಳಿ ತಾನು ಚಿತ್ರಾಗೆ ಹೊಡೆದಿರುವುದಾಗಿ ಹೇಳಿ ಅಲ್ಲಿಂದ ಹೋಗಿದ್ದಾನೆ.

ಆದರೆ ಅಪ್ಪ-ಅಮ್ಮನ ಜಗಳದ ಬಗ್ಗೆ ತಿಳಿದಿದ್ದ ಮಗಳು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಅಮ್ಮನನ್ನು ಸಮಾಧಾನ ಮಾಡಲೆಂದು ರೂಮಿಗೆ ಹೋದ ಆಕೆ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆಕೆ ಸಾವನ್ನಪ್ಪಿರುವುದು ತಿಳಿದು ಬಂದಿದೆ.  ಈ ಬಗ್ಗೆ ಮಗಳು ಪೊಲೀಸರಿಗೆ ವಿಷಯ ತಿಳಿಸಿ,  ತನ್ನ ತಂದೆಯ ವಿರುದ್ಧ ದೂರು ನೀಡಿದ್ದಾಳೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

error: Content is protected !!